ಬೆಳಗಾವಿ: "ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ 18 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ 1 ಸಾವಿರ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುತ್ತೇವೆ. ಇದರಲ್ಲಿ ಗ್ರಾಮೀಣ ಭಾಗಕ್ಕೂ ಆದ್ಯತೆ ಕೊಡುತ್ತೇವೆ" ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೇಮಕಗೊಂಡ 43 ಅಂಗನವಾಡಿ ಸಹಾಯಕಿಯರು ಹಾಗೂ 6 ಮಂದಿ ಕಾರ್ಯಕರ್ತೆಯರಿಗೆ ಬುಧವಾರ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು. "ರಾಜ್ಯ, ದೇಶ ಬೆಳೆದಂತೆ ನಾವು ಅಂಗನವಾಡಿ ಕೇಂದ್ರಗಳನ್ನು ಬದಲಾವಣೆ ಮಾಡುತ್ತಿದ್ದೇವೆ. ಅಂಗನವಾಡಿ ಕೇಂದ್ರಗಳ ಮೂಲಕ ಒಳ್ಳೆಯ ಪ್ರಜೆಗಳನ್ನು ಮಾಡುತ್ತೇವೆ ಎಂಬ ಭಾಷೆ ಕೊಡಬೇಕಿದೆ. ಈಗ ಖಾಸಗಿ ಶಾಲೆಗಳಲ್ಲಿ ನರ್ಸರಿ ಶಾಲೆಗೆ 50 ಸಾವಿರ ಹಣ ಕೇಳುತ್ತಾರೆ. ಅಂಗನವಾಡಿಯಲ್ಲಿ ಒಂದು ರೂಪಾಯಿ ಕೇಳಲ್ಲ, 2017ರಲ್ಲಿ ಕ್ಷೀರ ಭಾಗ್ಯ ತಂದವರು, ಮಕ್ಕಳಿಗೆ ಮೊಟ್ಟೆ ಭಾಗ್ಯ ಕೊಟ್ಟವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಮೊಟ್ಟೆ, ಚಿಕ್ಕಿಗೆ ಕೇಂದ್ರ ಸರ್ಕಾರ ಹಣ ಕೊಡಲ್ಲ. ರಾಜ್ಯ ಸರ್ಕಾರವೇ ಹಣ ಭರಿಸುತ್ತದೆ. ಇನ್ಮೇಲೆ ಅಂಗನವಾಡಿಗಳನ್ನು ನೋಡುವ ದೃಷ್ಟಿ ಬದಲಾಗಲಿದೆ. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ 10 ಕೋಟಿ ರೂಪಾಯಿ ಅನುದಾನವನ್ನು ಸ್ಕಿಲ್ ಡೆವಲಪ್ಮೆಂಟ್ಗೆ ಮೀಸಲಿಡಲಾಗಿದೆ" ಎಂದರು.
"ಬಡವರ, ಹಳ್ಳಿಯ ರೈತರ ಮಕ್ಕಳಿಗೆ ಪೌಷ್ಠಿಕ ಆಹಾರದ ಜೊತೆಯಲ್ಲಿ ಅವರಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಒಳ್ಳೆಯ ಆರೈಕೆ ಸಿಗಬೇಕು ಎನ್ನುವ ಆಶಯದಿಂದ 49 ವರ್ಷಗಳ ಹಿಂದೆ, ಇಂದಿರಾ ಗಾಂಧೀಜಿಯವರು 1974ರಲ್ಲಿ ಕರ್ನಾಟಕದಲ್ಲೇ, ಅದೂ, ನಮ್ಮ ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ಅಂಗನವಾಡಿಗಳನ್ನು ಸ್ಥಾಪಿಸಿದರು. ಕರ್ನಾಟಕದಲ್ಲಿ ಅಂಗನವಾಡಿ ಸ್ಥಾಪನೆಗೊಂಡು ಮುಂದಿನ ವರ್ಷಕ್ಕೆ ಐವತ್ತು ವರ್ಷಗಳು ತುಂಬಲಿವೆ. ನಮ್ಮ ಅಂಗನವಾಡಿಗಳು ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಷಯ" ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.