ಬೆಂಗಳೂರು: "ಬ್ರ್ಯಾಂಡ್ ಬೆಂಗಳೂರು ಮಾಡದೇ ಇದ್ದರೂ ಪರವಾಗಿಲ್ಲ ಬಾಂಬ್ ಬೆಂಗಳೂರು ಮಾಡಬೇಡಿ" ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಹಕಾರ ನೀಡಲಿದ್ದೇವೆ. ವೋಟ್ ಪಾಲಿಟಿಕ್ಸ್ ಬಿಟ್ಟು ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ" ಎಂದು ಆಗ್ರಹಿಸಿದರು.
"ನಾವೆಲ್ಲಾ ತಲೆತಗ್ಗಿಸುವ ಘಟನೆ ನಡೆದಿದೆ. ಕರ್ನಾಟಕದ ಶಾಂತಿಯ ತೋಟದಲ್ಲಿ ಶಾಂತಿ ಕದಡುವ ಭಯೋತ್ಪಾದಕ ಚಟುವಟಿಕೆ ನಡೆದಿದೆ. ಆಡಳಿತ ಪಕ್ಷದವರು ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು. ಈಗಾಗಲೇ ಕಾಂಗ್ರೆಸ್, ಏನಾದರೂ ಮಾಡಿ ನಿಮ್ಮನ್ನು ಸೇಫ್ ಮಾಡುತ್ತೇನೆ ಎನ್ನುವ ಆಶ್ವಾಸನೆ ನೀಡಿ ಭಯೋತ್ಪಾದಕರಿಗೆ ರಹದಾರಿ ಮಾಡಿಕೊಟ್ಟಿದೆ. ಪರಿಣಾಮ ಅವರು ಎದೆಯುಬ್ಬಿಸಿ ಓಡಾಡುತ್ತಿದ್ದಾರೆ" ಎಂದು ಹೇಳಿದರು.
"ದೇಶ-ವಿದೇಶದ ಕಂಪನಿಗಳಿರುವ ಕಡೆ ಈ ಸ್ಫೋಟ ಆಗಿದೆ. ಬೆಂಗಳೂರು ವರ್ಚಸ್ಸು ಕಡಿಮೆ ಮಾಡಬೇಕು, ಅಭದ್ರತೆ ಸೃಷ್ಟಿಸಬೇಕು ಎಂದು ಘಟನೆ ನಡೆದಿದೆ. ಸಿದ್ದರಾಮಯ್ಯ ಸಿಎಂ ಆದಾಗೆಲ್ಲಾ ಇಂತಹ ಪುಂಡ ಪೋಕರಿಗಳಿಗೆ ರೆಕ್ಕಪುಕ್ಕ ಬರುತ್ತದೆ. ಅಂದು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟವಾದಾಗ ಅವರನ್ನು ನಮ್ಮ ಬ್ರದರ್ಸ್ ಎಂದು ಕರೆದಿದ್ದ ಡಿ.ಕೆ.ಶಿವಕುಮಾರ್ ಇಂದು ಈ ಘಟನೆಯಲ್ಲಿರುವವರನ್ನು ಅಂಕಲ್ ಎನ್ನುತ್ತಾರಾ?. ನಾಳೆ ನಮ್ಮನ್ನು ಏನೆನ್ನುತ್ತೀರೋ? ಆದರೆ ರಾಜ್ಯದ ಭದ್ರತೆ ಧಕ್ಕೆ ತರಬೇಡಿ, ಆಡಳಿತ ಪಕ್ಷವಾಗಿ ನಡೆದುಕೊಳ್ಳಿ. ಇದು ರಾಜ್ಯದ ಭದ್ರತೆಯ ಪ್ರಶ್ನೆ. ನಾವೆಲ್ಲಾ ಬರುತ್ತೇವೆ, ಹೋಗುತ್ತೇವೆ. ಆದರೆ ರಾಜ್ಯ ಹಾಗೆಯೇ ಇರಬೇಕು. ಮುಂದಿನ ಜನಾಂಗ ನಮ್ಮನ್ನು ಟೀಕಿಸಬಾರದು. ಪದೇ ಪದೇ ಈ ರೀತಿ ಘಟನೆ ನಡೆದರೆ ಶಾಂತಿಯ ತೋಟ ಹೇಗಾಗುತ್ತದೆ?. ಹಾಗಾಗಿ ಇಂತಹ ಘಟನೆಗಳಲ್ಲಿ ಮೃದುಧೋರಣೆ ತಾಳಬೇಡಿ" ಎಂದರು.
"ಇಂದಿನ ಸ್ಫೋಟ ಪ್ರಕರಣದಲ್ಲಿನ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು. ಇಡೀ ರಾಜ್ಯದಲ್ಲಿ ನಿಮ್ಮ ಕಾನೂನು ಸುವ್ಯವಸ್ಥೆ, ನಿಮ್ಮ ಗುಪ್ತಚರ, ನಿಮ್ಮ ಸರ್ಕಾರ ಬದುಕಿದ್ದರೆ ಕಠಿಣ ಕ್ರಮ ಕೈಗೊಳ್ಳಿ. ವೋಟ್ ಪಾಲಿಟಿಕ್ಸ್ ಬಿಡಿ. ರಾಜ್ಯದ ಭದ್ರತೆ ದೃಷ್ಟಿಯಿಂದ ಅಲರ್ಟ್ ಆಗಿ, ಇದು ದೇಶದ್ರೋಹದ ಕೆಲಸ ಈಗಲೂ ನೀವು ಅಲರ್ಟ್ ಆಗದಿದ್ದಲ್ಲಿ ಜನ ಕ್ಷಮಿಸಲ್ಲ. ನಮಗೆ ದೇಶ ಮೊದಲು ಪಕ್ಷ ನಂತರ ಎಂದು ನಮ್ಮ ನಾಯಕರು ಹೇಳಿದ್ದಾರೆ. ವೋಟ್ ಬ್ಯಾಂಕ್ಗಾಗಿ ಸರ್ಕಾರ ಮೃದುಧೋರಣೆ ಅನುಸರಿಸುತ್ತಿದೆ. ಸರ್ಕಾರಕ್ಕೆ ಎಲ್ಲ ಸಹಕಾರ ಕೊಡಲಿದ್ದೇವೆ, ಕ್ರಮ ಕೈಗೊಳ್ಳಲಿ" ಎಂದು ಹೇಳಿದರು.
ಇದನ್ನೂ ಓದಿ:ಬಾಂಬ್ ಸ್ಫೋಟದ ಆರೋಪಿ ಬಸ್ನಿಂದಿಳಿದು ಕೆಫೆಗೆ ಬಂದು ರವೆ ಇಡ್ಲಿ ತಿಂದಿದ್ದ: ಡಿಸಿಎಂ ಡಿ.ಕೆ.ಶಿವಕುಮಾರ್