ಧಾರವಾಡ:ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ಬೆಳೆ ಹಾನಿಯಾಗಿದೆ.
ಶಿರೂರ ಗ್ರಾಮದ ರೈತ ಅರ್ಜುನಗೌಡ ಬಾಳನಗೌಡ ಸುಮಾರು ಎರಡು ಲಕ್ಷ ರೂ ಖರ್ಚು ಮಾಡಿ, 8 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಧಾರಾಕಾರ ಮಳೆಯಿಂದ ನೀರು ಜಮೀನಿಗೆ ನುಗ್ಗಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಅಕಾಲಿಕ ಮಳೆಯಿಂದಾಗಿ ಸುಮಾರು 10 ಲಕ್ಷ ರೂ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಅಳಲು ತೋಡಿಕೊಂಡಿರುವ ರೈತ, ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಳೆಯಿಂದ ಧಾರವಾಡ ಜಿಲ್ಲೆಯ ಹಲವೆಡೆ ಬೆಳೆ ಹಾನಿ (ETV Bharat) ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿ, ಅಧಿಕಾರಿಗಳೊಂದಿಗೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ, "ಬೆಣ್ಣಿಹಳ್ಳದಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಬೆಣ್ಣಿಹಳ್ಳ ಕಾಮಗಾರಿಗೆ ಈಗಾಗಲೇ ಸರ್ಕಾರ 200 ಕೋಟಿ ರೂ ಬಿಡುಗಡೆ ಮಾಡಿದೆ. ಐದಾರು ತಿಂಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ" ಎಂದು ಭರವಸೆ ನೀಡಿದರು.
"ನವಲಗುಂದ ತಾಲೂಕಿನ ಶಿರೂರು, ಹನಸಿ, ಗುಮ್ಮಗೋಳ, ಮೊರಬಕ್ಕೆ ಇಂದು ಭೇಟಿ ನೀಡಿದ್ದೇನೆ. ಹಣಸಿ ಮತ್ತು ಶಿರಕೋಳ ನಡುವೆ ಸಂಚಾರ ಸ್ಥಗಿತಗೊಂಡಿದ್ದು, ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು"ಎಂದು ತಿಳಿಸಿದರು.
ಮಳೆಗೆ ಜಿಲ್ಲೆಯ 25,525 ಹೆಕ್ಟೇರ್ ಬೆಳೆ ಹಾನಿ:ಮತ್ತೊಂದೆಡೆ, "ಧಾರವಾಡ ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ 14ರವರೆಗೆ ಸುರಿದ ಮಳೆಯಿಂದಾಗಿ 25,525 ಹೆಕ್ಟೇರ್ ಬೆಳೆ (ಕೃಷಿ ಮತ್ತು ತೋಟಗಾರಿಕೆ) ಹಾನಿಯಾಗಿದೆ" ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
"ಕೃಷಿ ಬೆಳೆ 24,950 ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆ 575 ಹೆಕ್ಟೇರ್ ಹಾನಿಯಾಗಿದೆ. ತಾಲೂಕುವಾರು ನೋಡುವುದಾದರೆ ನವಲಗುಂದ - 8,950, ಅಣ್ಣಿಗೇರಿ - 800, ಕುಂದಗೋಳ - 8,700 ಹಾಗೂ ಹುಬ್ಬಳ್ಳಿ- 6,500 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ನವಲಗುಂದ- 15, ಕುಂದಗೋಳ- 500, ಧಾರವಾಡ 20 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಜೂನ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಒಟ್ಟು 34,303.85 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ಹಾನಿಯಾಗಿವೆ" ಎಂದು ತಿಳಿಸಿದ್ದಾರೆ.
ಕುಂದಗೋಳ, ನವಲಗುಂದ ತಾಲೂಕಿನಲ್ಲಿ ಅಪಾರ ಪ್ರಮಾಣಣ ಬೆಳೆ ಹಾನಿಯಾಗಿದೆ. ಮೆಣಸಿನಕಾಯಿ, ಹತ್ತಿ ಬೆಳೆಗಳು ನೀರಿನಲ್ಲಿ ನೆಂದು ಕೊಳೆಯುವ ಸ್ಥಿತಿಗೆ ತಲುಪಿದ್ದು, ಸೂಕ್ತ ಪರಿಹಾರಕ್ಕೆ ಗುಡೇನಕಟ್ಟಿ ರೈತ ಫಕೀರಪ್ಪ ಕಮ್ಮಾರ ಮನವಿ ಮಾಡಿದರು.
ಇನ್ನು ನಿರಂತರ ಮಳೆಯಿಂದ ಬಿತ್ತನೆ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ಅಕ್ಟೋಬರ್ ಮೊದಲ ವಾರದಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಶೇ.90ರಷ್ಟು ಬಿತ್ತನೆ ಕಾರ್ಯ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಶೇ.2ರಷ್ಟೂ ಬಿತ್ತನೆಯಾಗಿಲ್ಲ.
ಇದನ್ನೂ ಓದಿ:ಸುರಿಯುತ್ತಿರುವ ಮಳೆಯಿಂದ ಬೆಂಗಳೂರಲ್ಲಿ ಹಲವು ಅವಾಂತರ: ಜನಜೀವನ ಅಸ್ತವ್ಯಸ್ತ