ಬೆಂಗಳೂರು:ಬೆಳಗಾವಿಯ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಪರಿಷತ್ ಸದಸ್ಯ ಸಿ.ಟಿ.ರವಿ ಅಶ್ಲೀಲ ಪದ ಬಳಸಿದ್ದಾರೆನ್ನಲಾದ ಪ್ರಕರಣ ಸಂಬಂಧ ಪರಿಷತ್ ಸದಸ್ಯರಾದ ಉಮಾಶ್ರೀ ಮತ್ತು ನಾಗರಾಜ್ ಯಾದವ್ ಅವರ ಹೇಳಿಕೆಯನ್ನು ಸಿಐಡಿ ದಾಖಲಿಸಿಕೊಂಡಿದೆ.
ಪ್ರಕರಣ ಸಂಬಂಧ ಪರಿಷತ್ ಕಾಂಗ್ರೆಸ್ ಸದಸ್ಯ ಉಮಾಶ್ರೀ ಮತ್ತು ನಾಗರಾಜ್ ಯಾದವ್ ಗುರುವಾರ ಸಿಐಡಿ ವಿಚಾರಣೆಗೆ ಹಾಜರಾಗಿದ್ದು, ಕಲಾಪದ ಸಂದರ್ಭದಲ್ಲಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಸಿದ ಕುರಿತು ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಘಟನೆ ವೇಳೆ ವಿಧಾನ ಪರಿಷತ್ ಕಲಾಪದಲ್ಲಿದ್ದ ಯತೀಂದ್ರ ಸಿದ್ದರಾಮಯ್ಯ ಅವರಿಗೂ ನೊಟೀಸ್ ನೀಡಲು ಸಿಐಡಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಬೆಳಗ್ಗೆ 10.30ಕ್ಕೆ ಬಂದ ಉಮಾಶ್ರೀ ಅವರನ್ನು ಮಹಿಳಾ ಡಿವೈಎಸ್ಪಿಯೊಬ್ಬರು ಮಧ್ಯಾಹ್ನ 12.30ರವರೆಗೆ ವಿಚಾರಣೆ ನಡೆಸಿದ್ದಾರೆ. ಹಾಗೆಯೇ ಮತ್ತೊಬ್ಬ ಪರಿಷತ್ ಸದಸ್ಯ ನಾಗರಾಜ್ ಯಾದವ್ 11 ಗಂಟೆಗೆ ತೆರಳಿದ್ದು, 1 ಗಂಟೆವರೆಗೂ ಡಿವೈಎಸ್ಪಿ ಕೇಶವಮೂರ್ತಿ ವಿಚಾರಣೆ ನಡೆಸಿದ್ದು, ಲಿಖಿತ ಮತ್ತು ಮೌಖಿಕ ರೂಪದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಕೂಡ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪರಿಷತ್ ಕಲಾಪ ಎಷ್ಟು ಗಂಟೆಗೆ ಆರಂಭವಾಯಿತು? ನೀವುಗಳು ಎಷ್ಟು ಗಂಟೆವರೆಗೂ ಕಲಾಪದಲ್ಲಿ ಇದ್ದಿರಿ? ಸಿ.ಟಿ.ರವಿ ಅವರು ಮಹಿಳಾ ಸಚಿವರಿಗೆ ಅಶ್ಲೀಲ ಪದ ಬಳಸಿದಾಗ ಸ್ಥಳದಲ್ಲಿ ನೀವುಗಳು ಇದ್ದರಾ? ಸೇರಿ ಸುಮಾರು 40ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.