ಬೆಂಗಳೂರು: ರಾಜ್ಯಪಾಲರು ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ತಮ್ಮ ಭಾಷಣದಲ್ಲಿ ಐದು ಗ್ಯಾರಂಟಿಗಳ ಬಗಗಷ್ಟೇ ಹೇಳಿದ್ದಾರೆ, ಹೊಸತೇನೂ ಇಲ್ಲ. ಅನುದಾನ ಖಾಲಿಯಾಗಿದೆ ಎಂದು ಕೇಂದ್ರದ ಮೇಲೆ ಹೇಳುವುದನ್ನು ಪರಿಪಾಠ ಮಾಡಿಕೊಂಡಿದ್ದಾರೆ. ಕೇಂದ್ರದ ಯೋಜನೆಗಳನ್ನೇ ತಮ್ಮ ಸಾಧನೆ ಎಂದು ಬಿಂಬಿಸಿಕೊಂಡಿದ್ದಾರೆ. ಇದೊಂದು ಸಪ್ಪೆ ಭಾಷಣ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಟೀಕಿಸಿದರು.
ವಿಧಾನಸೌಧದಲ್ಲಿರುವ ಪಕ್ಷದ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಮೂಲಕ ಜನರಿಗೆ ತಪ್ಪು ಮಾಹಿತಿ ಕೊಡಿಸಿದೆ. ಎಸ್ಸಿ, ಎಸ್ಟಿಗೆ 30 ಸಾವಿರ ಕೋಟಿ ರೂ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಜಲಜೀವನ್, ನರೇಗಾ ಇವೆಲ್ಲವನ್ನೂ ಕೇಂದ್ರ ಸರ್ಕಾರ ಮಾಡುತ್ತದೆ. ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದಾರೆಯೇ ಹೊರತು ಕೇಂದ್ರ ಸರ್ಕಾರದ ಯೋಜನೆಗಳನ್ನು ಹೇಳಿಲ್ಲ. ಕೇಂದ್ರದಿಂದ ಏನು ಕೊಡಬೇಕೋ ಅದನ್ನು ಕೊಡುತ್ತಾರೆ. ಕಾಂಗ್ರೆಸ್ನವರು ಬರ ಪರಿಹಾರದ ಎರಡು ಸಾವಿರ ರೂಪಾಯಿಯನ್ನು ಇನ್ನೂ ರೈತರಿಗೆ ತಲುಪಿಸಿಲ್ಲ. ಆದರೆ ಕೇಂದ್ರದ ಕಡೆ ಬೆರಳು ತೋರಿಸುವುದು ಮಾತ್ರ ನಿಂತಿಲ್ಲ" ಎಂದರು.
"ನಮ್ಮ ಪಕ್ಷದಿಂದ ಯಾರೂ ಕೂಡ ಕಾಂಗ್ರೆಸ್ಗೆ ಹೋಗಲ್ಲ. ನಾವು ಪಕ್ಷ ಸಂಘಟನೆ ಮಾಡುತ್ತೇವೆ" ಎಂದು ಸ್ಪಷ್ಟಪಡಿಸಿದ ಜಿ.ಟಿ.ದೇವೇಗೌಡ, ಕೆಂಪಣ್ಣ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸುತ್ತಾ, "ಕಾಂಗ್ರೆಸ್ನಲ್ಲಿ ಕಮಿಷನ್ ದಂಧೆ ಇನ್ನೂ ಜಾಸ್ತಿ ಆಗ್ತಿದೆ. ಕೆಂಪಣ್ಣ ಹಿರಿಯ ಮನುಷ್ಯ, ದುಡಕಲ್ಲ. 40% ಕಮಿಷನ್ ದಂಧೆ ನಡೆಯುತ್ತಿದೆ ಎಂದು ಹೇಳಿ ಬಿಜೆಪಿ ಸರ್ಕಾರವನ್ನು ಸೋಲಿಸಿದ್ದೀರಿ. ಈಗ ಕಾಂಗ್ರೆಸ್ ಸರ್ಕಾರದಲ್ಲಿ 40%ಕ್ಕಿಂತ ಜಾಸ್ತಿ ಕಮಿಷನ್ ದಂಧೆ ನಡೆಯುತ್ತಿದೆ. ಕೆಂಪಣ್ಣ ಬಾಯಿ ಮುಚ್ಚಿಕೊಳ್ಳಲ್ಲ. ಯಾರೇ ಇರಲಿ ಕೆಂಪಣ್ಣ ಪ್ರಾಮಾಣಿಕವಾಗಿ ಮಾತನಾಡುತ್ತಾರೆ" ಎಂದು ಹೇಳಿದರು.
"ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ಸಭೆ ನಡೆಸಲಾಗಿದೆ. ಮೈತ್ರಿ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಸೀಟು ಹಂಚಿಕೆ ಬಗ್ಗೆಯೂ ಅಪಸ್ವರ ಎತ್ತಬಾರದು ಎಂದು ಅವರು ಹೇಳಿದ್ದಾರೆ. ಹಾಗಾಗಿ ನಾವೆಲ್ಲರೂ ಪ್ರೀತಿಯಿಂದ ಒಟ್ಟಾಗಿದ್ದೇವೆ. ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಬಹಳ ಮಂದಿ ನಾಯಕರು ಬಿಜೆಪಿಯಲ್ಲಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಜೆಡಿಎಸ್ನಲ್ಲಿ ತೀರ್ಮಾನ ಮಾಡುತ್ತಾರೆ. ನಾವ್ಯಾರೂ ರೆಕಮೆಂಡ್ ಮಾಡೋಕೆ ಹೋಗಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ:ವಿಧಾನ ಮಂಡಲ ಜಂಟಿ ಅಧಿವೇಶನ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೊಗಳಿದ ರಾಜ್ಯಪಾಲರು