ಹಾವೇರಿ:ಯಾರು ಎಷ್ಟೇ ದುಡ್ಡು ಖರ್ಚು ಮಾಡಲಿ, ಶಿಗ್ಗಾಂವಿ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು 10 ಸಲ ಬರಲಿ, ಉಪಮುಖ್ಯಮಂತ್ರಿ ಇಲ್ಲೇ ಮೊಕ್ಕಾಂ ಹೂಡಲಿ. ಆದರೆ ಭರತ್ ಬೊಮ್ಮಾಯಿ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಶಿಗ್ಗಾಂವಿ ತಾಲೂಕಿನ ಮಂತ್ರೋಡಿಯಲ್ಲಿ ಇಂದು ಎನ್ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಪ್ರಚಾರ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭರತ್ ಬೊಮ್ಮಾಯಿ ಅವರನ್ನು ಸೋಲಿಸುವ ಶಕ್ತಿ ಕಾಂಗ್ರೆಸ್ನಲ್ಲಿ ಯಾರಿಗೂ ಇಲ್ಲ. ಭರತ್ ಬೊಮ್ಮಾಯಿಯೇ ನಮ್ಮ ಎಂಎಲ್ಎ ಎಂದು ಜನ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ರೈತರು ಮತ್ತು ಜನರಿಗೆ ವಕ್ಫ್ ಭಯ ಇದೆ; ವಕ್ಫ್ ಕರಾಳ ಛಾಯೆ ಸವಣೂರು ತಾಲೂಕಿನ ಮೇಲೆ ಬಿದ್ದಿದೆ. ಕಾಂಗ್ರೆಸ್ಗೆ ವೋಟ್ ಹಾಕಿದರೆ ಇದ್ದ ಆಸ್ತಿಯನ್ನು ಕಳೆದುಕೊಳ್ಳುತ್ತೇವೆ ಎಂಬ ಭಯ ಇಲ್ಲಿನ ರೈತರು ಮತ್ತು ಜನರಲ್ಲಿ ಕಾಡುತ್ತಿದೆ. ದೇಶಾದ್ಯಂತ ವಕ್ಫ್ ಬಳಿ ಒಂಬತ್ತುವರೆ ಲಕ್ಷ ಎಕರೆ ಜಮೀನು ಇದೆ. ಭಾರತದಲ್ಲಿ ಪಾಕಿಸ್ತಾನ ನಿರ್ಮಾಣವಾಗಿದೆ. ಅವರು ಭಾರತವನ್ನೇ ನಮ್ಮದು ಎನ್ನುತ್ತಾರೆ. ಪಾರ್ಲಿಮೆಂಟ್, ವಿಧಾನಸೌಧ ನಮ್ಮದು ಅಂದ್ರು, ಈಗ ಬೆಂಗಳೂರು ಮೆಜೆಸ್ಟಿಕ್ ನಮ್ಮದು ಅಂತಿದ್ದಾರೆ ಎಂದು ವಕ್ಫ್ ವಿರುದ್ಧ ಕಿಡಿಕಾರಿದರು.
ಶಿಗ್ಗಾಂವಿಯಲ್ಲಿ ಬೊಮ್ಮಾಯಿ vs ಕಾಂಗ್ರೆಸ್: ಶಿಗ್ಗಾಂವಿ ಕ್ಷೇತ್ರದಲ್ಲಿ ಈ ಬಾರಿಯ ಎಲೆಕ್ಷನ್ ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಹಣ ಹಂಚುವುದರಲ್ಲಿ ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ನಡೀತಿದೆ. ಸಮುದಾಯವಾರು ಶಾಸಕರು ಹಣ ಹಂಚುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹಂಚುವುದನ್ನು ನೋಡಿರಲಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.