ಕಾಂಗ್ರೆಸ್ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ ಹುಬ್ಬಳ್ಳಿ:''ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಕಾಂಗ್ರೆಸ್ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಕಚ್ಚಾಡುತ್ತಿದ್ದಾರೆ. ಹೆಚ್ಚಿನ ಡಿಸಿಎಂಗಳನ್ನು ಮಾಡಿ ಡಿ.ಕೆ.ಶಿವಕುಮಾರ ಅವರನ್ನ ಮೂಲೆಗುಂಪು ಮಾಡುವ ತಂತ್ರ ನಡೆದಿದೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಇಂದು (ಶನಿವಾರ) ಮಾತನಾಡಿದ ಅವರು, ''ಕಾನುನಾತ್ಮಕವಾಗಿಯೂ ಡಿಸಿಎಂ ಡಿ.ಕೆ. ಶಿವಕುಮಾರ್ಗೆ ತೊಂದರೆ ಕೊಡುವ ಪ್ಲಾನ್ ಮಾಡಲಾಗಿದೆ. ಅದರಲ್ಲಿ ಸಫಲವಾಗದಿದ್ದರೂ ಪ್ಲಾನ್ ಮಾಡುತ್ತಲೇ ಇದ್ದಾರೆ. ಗ್ಯಾರಂಟಿ ಎಂದು ಹೇಳುವ ರಾಜ್ಯ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ'' ಎಂದರು.
ಮಂಡ್ಯ ಟಿಕೆಟ್ ಗೊಂದಲ ವಿಚಾರ:ಮಂಡ್ಯ ಟಿಕೆಟ್ ಗೊಂದಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಸುಮಲತಾ ಅವರ ಜೊತೆ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡಿದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯುತ್ತೆ'' ಎಂದರು.
ಕನಿಷ್ಠ 20 ಸ್ಥಾನ ಗೆಲ್ಲದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತೆ ಎಂಬ ಶಾಸಕ ಎಸ್.ಆರ್ ಶ್ರೀನಿವಾಸ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಅವರು 20 ಕ್ಷೇತ್ರ ಅಂತಾ ಯಾಕೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಐದಕ್ಕಿಂತ ಹೆಚ್ಚು ಗೆಲ್ಲಲು ಅವರಿಗೆ ಸಾಧ್ಯವಿಲ್ಲ. ಹೀಗಾಗಿ ಸಿದ್ಧರಾಮಯ್ಯ ರಾಜೀನಾಮೆ ಕೊಡಲೇಬೇಕಾಗುತ್ತೆ'' ಎಂದು ಕಿಡಿಕಾರಿದರು.
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದ ಕುರಿತು ಪ್ರೀತಂಗೌಡ ಹೇಳಿಕೆಗೆ ಕಿಡಿಕಾರಿದ ಜೋಶಿ, ''ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಮಾತನಾಡಿ ಸರಿಮಾಡುತ್ತಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ದೇವೇಗೌಡರ ನಡುವೆ ಮೈತ್ರಿಯ ಮಾತುಕತೆಯಾಗಿದೆ. ನಮಗೆ ಮಾತನಾಡುವ ಅಧಿಕಾರವಿಲ್ಲ. ಪ್ರೀತಂ ಗೌಡ ಅವರೂ ಸಹ ಬಹಿರಂಗ ಹೇಳಿಕೆ ನೀಡೋದನ್ನು ನಿಲ್ಲಿಸಬೇಕು. ನೀವೇನಿದ್ದರೂ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಸೇರಿದಂತೆ ನಾಯಕರ ಜೊತೆ ಮಾತನಾಡಿ. ಅದನ್ನು ಬಿಟ್ಟು ಬಹಿರಂಗ ಹೇಳಿಕೆ ನೀಡುವುದನ್ನು ನಿಲ್ಲಿಸಿ'' ಎಂದು ಸಲಹೆ ನೀಡಿದರು.
ಜಗದೀಶ್ ಶೆಟ್ಟರ್ ಟಿಕೆಟ್ ಇನ್ನೂ ಅಂತಿಮಗೊಳ್ಳದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಇನ್ನೂ ಬೆಳಗಾವಿ ಟಿಕೆಟ್ ಅಂತಿಮವಾಗಿಲ್ಲ. ಹೀಗಿರುವಾಗ ಶೆಟ್ಟರ್ ಅತಂತ್ರ ಹೇಗಾಗುತ್ತಾರೆ? ಎಲ್ಲ ಕಡೆಯೂ ಪರ ಹಾಗೂ ವಿರೋಧದ ಮಾತುಕೇಳಿ ಬರುತ್ತಿದೆ. ಬೆಳಗಾವಿ ಟಿಕೆಟ್ ವಿಚಾರದಲ್ಲಿ ಶೆಟ್ಟರ್ ಹೆಸರು ಮುಂಚೂಣಿಯಲ್ಲಿದೆ'' ಎಂದು ಅವರು ಉತ್ತರಿಸಿದರು.
ಇದನ್ನೂ ಓದಿ:ಆಡಳಿತ ವೈಖರಿಯಿಂದ ಮೋದಿ ಜನಪ್ರಿಯತೆ ಇನ್ನಷ್ಟು ಉತ್ತುಂಗಕ್ಕೆ ಏರಿದೆ: ಬಿ.ವೈ. ವಿಜಯೇಂದ್ರ - VIJAYENDRA PRAISES PM MODI