ಕರ್ನಾಟಕ

karnataka

ETV Bharat / state

ಹಿಂದುಳಿದ, ಎಸ್​​ಸಿ ಅಭಿವೃದ್ಧಿ ನಿಗಮಗಳಿಗೆ ಅನುದಾನ ಬಿಡುಗಡೆ ಶೂನ್ಯ; ಅಧಿಕಾರಿಗಳ ವಿರುದ್ಧ ಸಿಎಂ ಗರಂ - NO GRANT RELEASE

ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮಗಳಿಗೆ ಮೀಸಲಿಟ್ಟ ಅನುದಾನ ಬಳಸಿಕೊಳ್ಳದ ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. 3 ತಿಂಗಳಲ್ಲಿ ಬಳಸಲು ಟಾಸ್ಕ್​ ನೀಡಿದ್ದಾರೆ.

ಆಡಳಿತ ಶಕ್ತಿಕೇಂದ್ರ ವಿಧಾನಸೌಧ
ಆಡಳಿತ ಶಕ್ತಿಕೇಂದ್ರ ವಿಧಾನಸೌಧ (ETV Bharat)

By ETV Bharat Karnataka Team

Published : Jan 8, 2025, 8:44 PM IST

ಬೆಂಗಳೂರು:ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ(ಎಸ್​ಸಿ) ಸಮಾಜದ ಕಲ್ಯಾಣಕ್ಕಾಗಿ ರಚಿಸಲ್ಪಟ್ಟಿರುವ ವಿವಿಧ ಅಭಿವೃದ್ಧಿ ನಿಗಮಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಬಜೆಟ್​ನಲ್ಲಿ ಮೀಸಲಿಡಲಾಗುತ್ತದೆ. ಆದರೆ, 2024-25 ಆರ್ಥಿಕ ವರ್ಷದ ಮುಕ್ಕಾಲು ವರ್ಷ ಮುಗಿದರೂ, ಸಮುದಾಯವಾರು ಅಭಿವೃದ್ಧಿ ನಿಗಮಗಳಿಗೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಇನ್ನೊಂದಷ್ಟು ನಿಗಮಗಳಿಗೆ ಅತ್ಯಲ್ಪ ಹಣ ಬಿಡುಗಡೆ ಮಾಡಲಾಗಿದೆ.

ಆರ್ಥಿಕ ವರ್ಷದ ಕೊನೆಯ ಮೂರು ತಿಂಗಳು ಉಳಿದಿದ್ದು, ಬಜೆಟ್ ಅನುದಾನ ಬಳಕೆ ಸ್ಥಿತಿಗತಿ ಬಗ್ಗೆ ಪ್ರಗತಿ ಪರಿಶೀಲನೆಗೆ ಸಿಎಂ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ಈ ವೇಳೆ ಯಾವೆಲ್ಲಾ ಅಭಿವೃದ್ಧಿ ನಿಗಮಗಳಿಗೆ ಎಷ್ಟು ಪ್ರಮಾಣದಲ್ಲಿ ಅನುದಾನ ನೀಡಲಾಗಿದೆ ಎಂಬುದು ತಿಳಿದುಬಂದಿದೆ.

ಹಿಂದುಳಿದ ವರ್ಗಗಳ ಅಭಿವೃದ್ಧಿಗಿಲ್ಲ ಹಣ :ಒಂದಷ್ಟು ಹಿಂದುಳಿದ ವರ್ಗಗಳ ಸಮುದಾಯ ಅಭಿವೃದ್ಧಿ ನಿಗಮಗಳಿಗೆ ಅನುದಾನ ಬಿಡುಗಡೆ ಶೂನ್ಯವಾಗಿದೆ. ಬಜೆಟ್ ವರ್ಷದ ಒಂಬತ್ತು ತಿಂಗಳು ಕಳೆದರೂ ಹಣ ಬಿಡುಗಡೆ ಮಾಡದೇ ಇರುವುದು ಆಡಳಿತ ಯಂತ್ರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

ಡಿಸೆಂಬರ್​​ವರೆಗಿನ ಕೆಡಿಪಿ ಪ್ರಗತಿ ವರದಿ ಅಂಕಿಅಂಶದ ಪ್ರಕಾರ, ಹಲವು ಅಭಿವೃದ್ಧಿ ನಿಗಮಗಳಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಪ್ರಸಕ್ತ ಬಜೆಟ್ ವರ್ಷದಲ್ಲಿ ಕರ್ನಾಟಕ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 60 ಕೋಟಿ ರೂಪಾಯಿ, ದೇವರಾಜ್​ ಅರಸ್​ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂಪಾಯಿ, ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 8 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಲಾಗಿದ್ದರೂ, ಬಿಡುಗಡೆ ಭಾಗ್ಯವಿಲ್ಲ.

ಓದಿ:ಅಪರಾಧಿಗಳಿಗೆ ಭಯ, ಜನಸಾಮಾನ್ಯರಿಗೆ ಭಯಮುಕ್ತ ವಾತಾವರಣ ನಿರ್ಮಿಸಿ: ಪೊಲೀಸರಿಗೆ ಸಿಎಂ‌ ಸೂಚನೆ

ಅದೇ ರೀತಿ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 5 ಕೋಟಿ ರೂಪಾಯಿ, ಬಿಲ್ಲವ/ಈಡಿಗ ಸಮಾಜದ ಅಭಿವೃದ್ಧಿಗೆ 10 ಕೋಟಿ ರೂಪಾಯಿ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 60 ಕೋಟಿ ರೂಪಾಯಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 13 ಕೋಟಿ ಅನುದಾನ ಹಂಚಿಕೆ ಮಾಡಿದ್ದರೂ, ಈವರೆಗೆ ಒಂದು ಬಿಡಿಗಾಸು ಕೂಡ ಬಿಡುಗಡೆ ಮಾಡಲಾಗಿಲ್ಲ.

ಅರ್ಧಂಬರ್ಧ ಅನುದಾನ ಬಿಡುಗಡೆ :ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ 5.01 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ 1.25 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿ ಖರ್ಚು ಮಾಡಲಾಗಿದೆ. ಹಿಂದುಳಿದ ವರ್ಗಗಳ ಇತರ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಒಟ್ಟು 191 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಈವರೆಗೆ 70.66 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಒಟ್ಟು 51.36 ಕೋಟಿ ರೂ. ವೆಚ್ಚವಾಗಿದೆ.

ಹಲವು ನಿಗಮಗಳಿಗೆ ಅತ್ಯಲ್ಪ ಹಣ ಬಿಡುಗಡೆ:ಕೆಡಿಪಿ ಪ್ರಗತಿ ವರದಿಯಲ್ಲಿ ಉಲ್ಲೇಖಿಸಿದಂತೆ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಹಲವು ಅಭಿವೃದ್ಧಿ ನಿಗಮಗಳಿಗೆ ಈವರೆಗೆ ಅತ್ಯಲ್ಪ ಅನುದಾನ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮಕ್ಕೆ 25 ಕೋಟಿ ರೂಪಾಯಿ ಹಂಚಿಕೆ ಮಾಡಿ, ಡಿಸೆಂಬರ್​ವರೆಗೆ 6.25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿ, ಅದರಲ್ಲಿ 12.50 ಕೋಟಿ ರೂ. ಬಿಡುಗಡೆಯಾಗಿದೆ. ಭೋವಿ ಅಭಿವೃದ್ಧಿ ನಿಗಮಕ್ಕೆ 55 ಕೋಟಿ ರೂ. ಹಂಚಿಕೆಯಾಗಿದ್ದು, 13.75 ಕೋಟಿ ರೂಪಾಯಿ ನೀಡಲಾಗಿದೆ. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮಕ್ಕೆ 60 ಕೋಟಿ ರೂ.‌ ಹಂಚಿಕೆ ಮಾಡಿ, ಈ ಪೈಕಿ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಪ್ರಗತಿ ಶೂನ್ಯದ ಬಗ್ಗೆ ಸಿಎಂ ಗರಂ :ಅನುದಾನ ಬಳಕೆ ಮಾಡದ ಅಧಿಕಾರಿಗಳ ಧೋರಣೆಯನ್ನು ಸಿಎಂ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. ಮಂಗಳವಾರ ನಡೆದ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಅಂಬೇಡ್ಕರ್, ಭೋವಿ ನಿಗಮ ಸೇರಿ ವಿವಿಧ ನಿಗಮಗಳಲ್ಲಿ ನೂರಾರು ಕೋಟಿ ಹಣ ಕೊಳೆಯುತ್ತಿದ್ದರೂ, ಖರ್ಚು ಮಾಡದ ನಿಗಮದ ಎಂಡಿಗಳಿಗೆ ನೋಟಿಸ್ ನೀಡಲು ಸೂಚಿಸಿ, ಬಜೆಟ್ ವರ್ಷದ ಅಂತ್ಯಕ್ಕೆ ಎಲ್ಲಾ ಹಣ ಖರ್ಚು ಮಾಡುವಂತೆಯೂ ತಾಕೀತು ಮಾಡಿದರು.

ಇದನ್ನೂ ಓದಿ:ರಾಜ್ಯದ ವಿವಿಗಳ ಉಪಕುಲಪತಿ ನೇಮಕಕ್ಕೆ ರಾಜ್ಯಪಾಲರಿಗೆ ಸರ್ವಾಧಿಕಾರ : ಕೇಂದ್ರದ ಕ್ರಮಕ್ಕೆ ಸಿಎಂ ಖಂಡನೆ

ABOUT THE AUTHOR

...view details