ಹುಬ್ಬಳ್ಳಿ:ರಾಷ್ಟ್ರೀಯ ತನಿಖಾ ಸಂಸ್ಥೆ ಬಹುದೊಡ್ಡ ಪ್ರಶಂಸೆಯ ಕೆಲಸವನ್ನು ಮಾಡಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣಗಳ ಮೇಲೆ ರಾಜಕೀಯ ಮಾಡುವಂತ ದುಸ್ಥಿತಿಗೆ ಇಳಿದಿರುವುದು ವಿಪರ್ಯಾಸದ ಸಂಗತಿ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ''ರಾಮೇಶ್ವರಂ ಕೆಫೆ ಬ್ಲಾಸ್ಟ್ ಆಗಿರುವ ಸಂದರ್ಭದಲ್ಲಿ ರಾಜ್ಯದ ಮಂತ್ರಿಗಳು ವೈಯಕ್ತಿಕ ದ್ವೇಷ, ಸಿಲಿಂಡರ್ ಬ್ಲಾಸ್ಟ್ ಎಂದು ಸಮಜಾಯಿಷಿ ನೀಡಿದ್ದರು. ತಕ್ಷಣ ಅನುಮಾನಗೊಂಡ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿತು. ಈ ನಿಟ್ಟಿನಲ್ಲಿ ಈಗ ಕೇಂದ್ರ ಗುಪ್ತಚರ ಇಲಾಖೆಯು ಈಗ ಮಹತ್ವದ ಕಾರ್ಯವನ್ನು ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ ಭದ್ರತೆಗೆ ಧಕ್ಕೆ ತರುವುದರ ಜೊತೆಗೆ ಇದು ಯಾವುದೇ ಟೆರೆರಿಸ್ಟ್ ಕೃತ್ಯ ಅಲ್ಲವೆಂದು ನಿರೂಪಿಸಲು ಹೊರಟಿದ್ದರು. ಇದು ದೇಶದ ಭದ್ರತೆಗೆ ಧಕ್ಕೆ ತರುವ ಬಹುದೊಡ್ಡ ಷಡ್ಯಂತ್ರ'' ಎಂದು ಆರೋಪಿಸಿದರು.
''ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಾಗಲೂ ವಿನಾಯಿತಿ ಕೊಡುವ ಕೆಲಸವನ್ನು ಮಾಡಿರುವ ಕಾಂಗ್ರೆಸ್ ಸರ್ಕಾರ ದೇಶದ ಬಗ್ಗೆ ದೇಶದ ಭದ್ರತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಇಂತಹ ರಾಜಕಾರಣ ಮಾಡುವುದು ಸರಿಯಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು.