ಮೈಸೂರು:ಕೃಷಿ ಹೊಂಡಕ್ಕೆ ಎಸೆದಿದ್ದ ನವಜಾತ ಶಿಶುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೇ ಅಸುನೀಗಿರುವ ಘಟನೆ ಮೈಸೂರು ತಾಲೂಕಿನ ಸಾಹುಕಾರ್ ಹುಂಡಿಯಲ್ಲಿ ನಡೆದಿದೆ.
ನಿನ್ನೆ (ಭಾನುವಾರ) ನವಜಾತ ಶಿಶುವನ್ನು ಬಟ್ಟೆಯಿಂದ ಸುತ್ತಿ ಕೃಷಿ ಹೊಂಡಕ್ಕೆ ಎಸೆಯಲಾಗಿತ್ತು. ನಂತರ ನವಜಾತ ಶಿಶುವನ್ನು ಸ್ಥಳೀಯರು ಮತ್ತು ಆಶಾ ಕಾರ್ಯಕರ್ತರು ರಕ್ಷಿಸಿ ನಗರದ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನವಜಾತ ಶಿಶು ಇಂದು ಮೃತಪಟ್ಟಿದೆ. ನಗರದ ಕೆ.ಆರ್. ಆಸ್ಪತ್ರೆಯ ಶವಗಾರದಲ್ಲಿ ನವಜಾತ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಈ ಕುರಿತು ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿ ಗುರುದೇವ್ ಮಾತನಾಡಿ, "ಪೋಷಕರು ಮಗುವನ್ನು ಜಮೀನಿನ ಕೃಷಿ ಹೊಂಡಕ್ಕೆ ಎಸೆದು ಹೋಗಿದ್ದಾರೆ. ನಂತರ ಸ್ಥಳೀಯರು ಈ ವಿಷಯವನ್ನ ತಕ್ಷಣ ನಮಗೆ ತಿಳಿಸಿದ್ದು, ನಾವು ಮತ್ತು ಆಶಾ ಕಾರ್ಯಕರ್ತರು ಮಗುವನ್ನ ರಕ್ಷಣೆ ಮಾಡಿ, ಆಂಬ್ಯುಲೆನ್ಸ್ನಲ್ಲಿ ಚೆಲುವಾಂಬ ಆಸ್ಪತ್ರೆಗೆ ರವಾನಿಸಿದ್ದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ" ಎಂದು ತಿಳಿಸಿದರು.
ದತ್ತು ಕೇಂದ್ರದ ಸಿಬ್ಬಂದಿ ಹೇಳಿದ್ದೇನು?:"ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನವಜಾತ ಶಿಶುವನ್ನು ಜಮೀನೊಂದರ ಕೃಷಿ ಹೊಂಡಕ್ಕೆ ಎಸೆಯಲಾಗಿತ್ತು. ಬೆಳಗ್ಗೆ ಶಿಶು ಆಳುವ ಶಬ್ದ ಕೇಳಿದ ಸ್ಥಳೀಯರು, ನಮ್ಮ ಇಲಾಖೆಗೆ ಮಾಹಿತಿ ನೀಡಿದರು. ನಾವು ತಕ್ಷಣ ಮಗವನ್ನು ಚೆಲುವಾಂಬ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದೆವು ಆದರೆ, ಶಿಶು ಚಿಕಿತ್ಸೆ ಮೃತಪಟ್ಟಿದೆ. ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಎಸೆದಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ಮೃತ ಶಿಶು ಯಾರದ್ದು ಎಂಬ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಮದುವೆಯಾಗದ ಜೋಡಿಯ ಶಿಶು ಇರಬಹುದು ಎಂಬ ಅನುಮಾನ ಇದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಬಗ್ಗೆ ಪರೀಶೀಲನೆ ಮಾಡುತ್ತಿದ್ದೇವೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ" ಎಂದರು.