ಮಂಗಳೂರು(ದಕ್ಷಿಣಕನ್ನಡ): ಗ್ರೀನ್ ಹೈಡ್ರೋಜನ್ ಎಂಬ ಹೊಸತಂತ್ರಜ್ಞಾನದ ವಿದ್ಯುತ್ ಉತ್ಪಾದನೆಗೆ ರಾಜ್ಯದಲ್ಲಿ ಹೊಸ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಗ್ರೀನ್ ಹೈಡ್ರೋಜನ್ ವಿದ್ಯುತ್ ಉತ್ಪಾದನೆ: ದಕ್ಷಿಣ ಕನ್ನಡ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳೊಂದಿಗೆ ನಡೆದ ಮೆಸ್ಕಾಂ ಕೆಪಿಟಿಸಿಎಲ್ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಗ್ರೀನ್ ಹೈಡ್ರೋಜನ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಈ ಶಕ್ತಿಯನ್ನು ಸರಕು ರೂಪದಲ್ಲಿ ಕಂಟೈನರ್ಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಕೊಂಡೊಯ್ಯಬಹುದು. ರಾಜ್ಯದಲ್ಲಿ ವಿದ್ಯುತ್ ಗೆ ಬೇಡಿಕೆ ಹೆಚ್ಚಾಗಿದೆ. ಗ್ರೀನ್ ಹೈಡ್ರೋಜನ್ ಈ ಬೇಡಿಕೆಗಳನ್ನು ಪೂರೈಸಲಿದೆ. ಅಲ್ಲದೆ ರಫ್ತು ಕೂಡ ಮಾಡಬಹುದು. ಈ ಹಿನ್ನೆಲೆಯಲ್ಲಿ ಹೊಸ ನೀತಿ ತರಲಾಗುತ್ತದೆ ಎಂದು ತಿಳಿಸಿದರು.
ಮಂಗಳೂರು ಪೈಲಟ್ ಯೋಜನೆಗೆ ಸೂಕ್ತ ಸ್ಥಳ:ಮಂಗಳೂರಿನಲ್ಲಿ ಅದಕ್ಕೆ ಸೂಕ್ತವಾದ ಸಮುದ್ರ, ಬಂದರು ವ್ಯವಸ್ಥೆ ಇದೆ. ಹಾಗಾಗಿ ಇಲ್ಲಿ ಪೈಲಟ್ ಯೋಜನೆ ಕೈಗೆತ್ತಿಕೊಳ್ಳುವುದು ಸೂಕ್ತವಾಗಿದೆ. ಇದಕ್ಕೆ ದೊಡ್ಡ ಕೈಗಾರಿಕೆಗಳು ಮುಂದೆ ಬರಬೇಕಾಗಿದೆ. ಜಾಗತಿಕ ಹೂಡಿಕೆ ಸಮಾವೇಶದಲ್ಲಿಯೂ ಬಹಳಷ್ಟು ಕೈಗಾರಿಕೋದ್ಯಮಿಗಳು ಆಸಕ್ತಿ ತೋರಿಸಿದ್ದಾರೆ. ದಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿಯೂ ಈ ಬಗ್ಗೆ ಚರ್ಚೆಯಾಗಿದೆ. ಇದಕ್ಕಾಗಿ ಮುಂದೆ ಬರುವ ಕೈಗಾರಿಕೆಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕಾಗಿದೆ. 300 ಕೆ ವಿ ಸಾಮರ್ಥ್ಯದಲ್ಲಿ ಪೈಲಟ್ ಪ್ರಾಜೆಕ್ಟ್ ಗೆ ಚಿಂತಿಸಲಾಗಿದೆ. ಪ್ರಸಕ್ತ ಈ ಬಗೆಗಿನ ಪ್ರಕ್ರಿಯೆಗಳು ಪ್ರಾಥಮಿಕ ಹಂತದಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದರು.