ಬೆಂಗಳೂರು:ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಪ್ರಮಾಣವನ್ನು ಏರಿಸಲು ಬಯಸಿರುವ ರಿವರ್ ಮೊಬಿಲಿಟಿ ಕಂಪನಿಗೆ ಅಗತ್ಯ ಭೂಮಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಇಂದು ತಮ್ಮನ್ನು ಭೇಟಿಯಾದ ಕಂಪನಿಯ ಸಿಇಒ ಅರವಿಂದ್ ಮಣಿ ಮತ್ತು ಉಪಾಧ್ಯಕ್ಷೆ ಮಯೂರಿ ಮೋಹಿಡೇಕರ್ ಜೊತೆ ಸಚಿವರು ಭವಿಷ್ಯದ ಸಂಪರ್ಕ ವ್ಯವಸ್ಥೆ ಕುರಿತು ಮಾತುಕತೆ ನಡೆಸಿದರು.
ಸದ್ಯಕ್ಕೆ ರಿವರ್ ಮೊಬಿಲಿಟಿ ಕಂಪನಿ ಹೊಸಕೋಟೆ ಬಳಿ ಇರುವ ತನ್ನ ಉತ್ಪಾದನಾ ಘಟಕದಲ್ಲಿ ವರ್ಷಕ್ಕೆ 1.20 ಲಕ್ಷ ಇ.ವಿ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿದೆ. ಇದನ್ನು ವರ್ಷಕ್ಕೆ 5 ಲಕ್ಷಕ್ಕೆ ಕೊಂಡೊಯ್ಯಲು ಕಂಪನಿ ಬಯಸಿದ್ದು, ಅದಕ್ಕಾಗಿ ಜಮೀನಿಗೆ ಬೇಡಿಕೆ ಇಟ್ಟಿದೆ. ಗೌರಿಬಿದನೂರು, ಕೋಲಾರದ ನರಸಾಪುರ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿ ತೋರಿಸಿದ್ದು, ಬಯಸಿದ ಪ್ರಕಾರ ಜಮೀನು ಹಂಚಿಕೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.