ಕರ್ನಾಟಕ

karnataka

ETV Bharat / state

ದಶಕಗಳಿಂದಲೂ ಮುಗಿಯದ ಹೆದ್ದಾರಿ ಕಾಮಗಾರಿ, ಕೆಲವೆಡೆ ಕೆಲಸ ಸ್ಥಗಿತ: ಉ.ಕ ಜಿಲ್ಲಾಧಿಕಾರಿ ಹೇಳುವುದೇನು? - NH 66 Widening Work - NH 66 WIDENING WORK

ಕುಂದಾಪುರ ಗಡಿಯಿಂದ ಗೋವಾ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಕಳೆದ 10 ವರ್ಷಗಳಿಂದಲೂ ನಡೆಯುತ್ತಿದ್ದು, ಜನರ ನಿತ್ಯ ಸಂಚಾರದ ಸಮಸ್ಯೆ ಮುಂದುವರೆದಿದೆ.

national highway work
ಹೆದ್ದಾರಿ ಕಾಮಗಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ (ETV Bharat)

By ETV Bharat Karnataka Team

Published : May 24, 2024, 9:46 AM IST

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ (ETV Bharat)

ಕಾರವಾರ:ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಆರಂಭವಾಗಿ 10 ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಒಂದೆಡೆ ಕಾಮಗಾರಿ ಮುಗಿಸದೆ ಜನರ ವಿರೋಧದ ನಡುವೆಯೂ ಟೋಲ್ ಸಂಗ್ರಹಿಸುತ್ತಿದ್ದರೆ, ಇನ್ನೊಂದೆಡೆ ಉಳಿದ ಕೆಲಸ ಪೂರ್ಣಗೊಳಿಸಲು ಗುತ್ತಿಗೆ ಪಡೆದ ಕಂಪನಿ ವಿಳಂಬ ಮಾಡುತ್ತಿದೆ. ಇದರಿಂದಾಗಿ ಪ್ರಯಾಣಿಕರಿಗೆ ಪ್ರತಿನಿತ್ಯದ ಕಿರಿಕಿರಿ ಮುಂದುವರೆದಿದೆ.

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣವನ್ನು ಮೂರು ವರ್ಷದಲ್ಲಿ ಮುಗಿಸುವುದಾಗಿ ಐಆರ್​​ಬಿ ಕಂಪನಿ ಸುಮಾರು 10 ವರ್ಷಗಳ ಹಿಂದೆಯೇ ಕಾಮಗಾರಿ ಪ್ರಾರಂಭಿಸಿತ್ತು. ಆದರೆ ಈವರೆಗೂ ಪೂರ್ಣವಾಗಿಲ್ಲ. ಅಲ್ಲಲ್ಲಿ ಅಪೂರ್ಣವಾಗಿರುವ ಕಾಮಗಾರಿಯನ್ನು ಕೆಲ ದಿನಗಳಿಂದ ಮಾಡದೇ ನಿಲ್ಲಿಸಲಾಗಿದ್ದು, ಕಾರ್ಮಿಕರು ತಮ್ಮ ತಮ್ಮ ಊರಿನತ್ತ ಹೋಗಿದ್ದಾರೆ. ಮಳೆಗಾಲ ಆರಂಭವಾಗುತ್ತಿರುವ ಕಾರಣ ರಸ್ತೆಯಲ್ಲಿ ಓಡಾಡುವ ಜನರಿಗೆ ಜೀವ ಭಯ ಕಾಡತೊಡಗಿದೆ.

ಕುಂದಾಪುರ ಗಡಿಯಿಂದ ಗೋವಾ ಗಡಿಯವರೆಗಿನ ಹೆದ್ದಾರಿ ಅಗಲೀಕರಣದಲ್ಲಿ ಭಟ್ಕಳದಿಂದ ಕಾರವಾರ ತಾಲೂಕಿನ ನಡುವೆ ಒಟ್ಟು 187.240 ಕಿಲೋಮೀಟರ್ ಕಾಮಗಾರಿ ಇದಾಗಿದೆ. 2014ರ ಮಾರ್ಚ್‌ನಲ್ಲಿಯೇ ಆರಂಭವಾಗಿದ್ದು, ಇದುವರೆಗೂ ಮುಗಿಸಿಲ್ಲ. ಇದರಿಂದ ಪ್ರತಿನಿತ್ಯ ಓಡಾಡುವಾಗ ಕಿರಿಕಿರಿ ಅನುಭವಿಸುವ ಜೊತೆಗೆ ಸುಗಮ ಸಂಚಾರವಿಲ್ಲದಿದ್ದರೂ ಟೋಲ್ ಕಟ್ಟಬೇಕಾಗಿರುವುದು ಸವಾರರಿಗೆ ಹೊರೆಯಾಗಿ ಪರಿಣಮಿಸಿದೆ.

''ರಸ್ತೆ ಕೆಲಸ ಪೂರ್ಣ ಮಾಡದೇ ಟೋಲ್​ ಕಟ್ಟುವುದು ಬಹಳ ಕಷ್ಟವಾಗುತ್ತಿದೆ. ಈಗ ಎಲ್ಲೆ ಕಡೆ ಕಾಮಗಾರಿ ಕೂಡ ನಿಲ್ಲಿಸಲಾಗಿದೆ. ಜನರು ಕೇಳಿದರೆ ಯಾರೂ ಕೂಡ ಸ್ಪಂದಿಸುತ್ತಿಲ್ಲ. ಹತ್ತು ವರ್ಷವಾದರೂ ಕೆಲಸ ಮುಗಿಸಿಲ್ಲ. ರಸ್ತೆಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿದ್ದು, ಬಹಳಷ್ಟು ಅಪಘಾತಗಳಾಗುತ್ತಿವೆ. ಕಾಮಗಾರಿ ಹಿನ್ನೆಲೆಯಲ್ಲಿ ಡಿವೈಡರ್​ಗಳ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿಲ್ಲ'' ಎಂದು ಸ್ಥಳೀಯ ವಾಹನ ಸವಾರ ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆ ಪಡೆದ ಕಂಪನಿಯವರು ಕೆಲಸ ನಿಲ್ಲಿಸಿದ ಬಗ್ಗೆ ಜಿಲ್ಲಾಡಳಿತದ ಬಳಿ ಕೇಳಿದರೆ, ಯಾವುದೇ ಕಾರಣಕ್ಕೂ ಕೆಲಸ ನಿಲ್ಲಿಸಲು ಬಿಡುವುದಿಲ್ಲ. ಶೀಘ್ರದಲ್ಲೇ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.

ಜಿಲ್ಲಾಧಿಕಾರಿ ಹೇಳುವುದೇನು?:''ರಸ್ತೆ ಕಾಮಗಾರಿ ಸರಿಯಾಗಿ ಆಗಿಲ್ಲ ಎಂಬ ಅತೃಪ್ತಿ ಜನರಲ್ಲಿದ್ದು, ಈ ಕುರಿತಂತೆ ನಮಗೆ ದೂರುಗಳು ಬಂದಿವೆ. ಜನಪ್ರತಿನಿಧಿಗಳೂ ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಥಳೀಯ ನಾಗರಿಕರು ಕೂಡ ಅಂಡರ್​ಪಾಸ್​, ಬೀದಿ ದೀಪಗಳ ವ್ಯವಸ್ಥೆ ಬೇಕು ಹಾಗೂ ಕೆಲವೆಡೆ ಕಾಮಗಾರಿ ಸರಿಯಿಲ್ಲದೆ, ಮನೆಗಳತ್ತ ನೀರು ನುಗ್ಗುತ್ತಿದೆ ಎಂದು ದೂರು ನೀಡಿದ್ದಾರೆ. ಸ್ವಲ್ಪ ಕಾಮಗಾರಿ ಮಾತ್ರ ಉಳಿದಿದೆ. ಜಾಗ ಒತ್ತುವರಿ ಹಾಗೂ ಪ್ಲಾಸ್ಟಿಂಗ್​ ಅನುಮತಿ, ಇತರ ಕಾರಣಗಳಿಂದಾಗಿ ಕೇವಲ 7.83 ಕಿ.ಮೀ ದೂರ ಮಾತ್ರ ಬಾಕಿ ಇದೆ. ಅದನ್ನೂ ಕೂಡ ಮಾಡಿ ಮುಗಿಸುತ್ತಾರೆ. ಕಾಮಗಾರಿ ಕುರಿತಂತೆ ನಾವು ಪಡೆದ ದೂರುಗಳನ್ನು ಸರ್ಕಾರಕ್ಕೆ ಕಳಿಸಲಾಗುವುದು'' ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.

ಇದನ್ನೂ ಓದಿ:ಒಂದೂವರೆ ವರ್ಷದಿಂದ ಕುಂಟುತ್ತಾ ಸಾಗಿದ ಹೆದ್ದಾರಿ ಕಾಮಗಾರಿ: ಅಪಘಾತಕ್ಕೆ ಶಿಕ್ಷಕ ಬಲಿ

ABOUT THE AUTHOR

...view details