ಹುಬ್ಬಳ್ಳಿ:ಮುಂಬೈನ ಅಖಿಲ ಭಾರತ ದೈಹಿಕ ಅಂಗವಿಕಲರ ಸಂಸ್ಥೆ (ಎಐಸಿಎಪಿಸಿ) ಹಾಗೂ ಹುಬ್ಬಳ್ಳಿಯ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಆಶ್ರಯದಲ್ಲಿ ಅಜಿತ್ ವಾಡೇಕರ್ ಅವರ ಸ್ಮರಣಾರ್ಥ ಏಪ್ರಿಲ್ 1ರಿಂದ 3ರ ವರೆಗೆ ನಗರದಲ್ಲಿ ರಾಷ್ಟ್ರಮಟ್ಟದ ಅಂಗವಿಕಲರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ದೈಹಿಕ ಅಂಗವಿಕಲರ ಸಂಸ್ಥೆಯ ಪ್ರಧಾನ ಕಾರ್ಯದಶಿರ್ ಶಿವಾನಂದ ಗುಂಜಾಳ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಭಾವಂತ ವಿಶೇಷ ಚೇತನ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ 1998 ರಿಂದ ನಗರದಲ್ಲಿ ಇಂತಹ ಪಂದ್ಯಾವಳಿ ಆಯೋಜಿಸುತ್ತ ಬರಲಾಗಿದೆ. ಈ ಬಾರಿ ರಾಜನಗರ ಕೆಎಸಿಎ ಕ್ರೀಡಾಂಗಣ, ಕರ್ನಾಟಕ ಜಿಮ್ಖಾನಾ ಮೈದಾನ ಹಾಗೂ ರೈಲ್ವೆ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಈಗಾಗಲೇ ಎಂಟು ಆವೃತ್ತಿಗಳನ್ನು ಪೂರೈಸಲಾಗಿದ್ದು, ಇದು 9ನೇ ಆವೃತ್ತಿಯಾಗಿದೆ. ಇದರಲ್ಲಿ ದೇಶದ ವಿವಿಧ ರಾಜ್ಯಗಳಿಂದ 8 ತಂಡಗಳು ಭಾಗವಹಿಸುತ್ತಿವೆ. ಅಂಗವಿಕಲರ ಕ್ರಿಕೆಟ್ ತಂಡ ಪ್ರತಿನಿಧಿಸಿದ ಅನೀಶ್ ರಾಜನ್, ಜಿತೇಂದ್ರ ವಿಎನ್, ನರೇಂದ್ರ ಮಂಗೋರೆ, ರಮೇಶ ನಾಯ್ಡು, ಅನ್ಯುಲ್, ಕುನಾಲ್ ಫನಾಸೆ, ಸುಗುನೇಶ್ ಮತ್ತು ಅವನೀಶ ತಿವಾರಿ ಸೇರಿ 130 ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.