ಚಾಮರಾಜನಗರ:ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವವರು ಈಗ ನಾಗಮಲೆಗೂ ಭೇಟಿ ನೀಡಬಹುದಾಗಿದೆ. ಭಕ್ತಾದಿಗಳು ಅರಣ್ಯ ಇಲಾಖೆಯ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಂಡು, ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳಬಹುದು.
ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಬಹುತೇಕ ಭಕ್ತಾದಿಗಳು ನಾಗಮಲೆ ಕ್ಷೇತ್ರಕ್ಕೆ ಹೋಗಿ ಬರುವುದು ಸಂಪ್ರದಾಯವಾಗಿತ್ತು. ಜಾತ್ರಾ ಮಹೋತ್ಸವ, ಹಬ್ಬ ಹರಿದಿನ ಸೇರಿದಂತೆ ಇನ್ನಿತರ ದಿನಗಳಲ್ಲಿ ಭಕ್ತಾದಿಗಳು ದಿನದ 24 ಗಂಟೆಯೂ ನಾಗಮಲೆ ಕ್ಷೇತ್ರಕ್ಕೆ ಹೋಗಿ ಬರುತ್ತಿದ್ದರು. ಆದರೆ, ಅಲ್ಲಿಗೆ ಹೋಗುವಾಗ ಹಾಗೂ ಬರುವಾಗ ಕಾಡು ಪ್ರಾಣಿಗಳ ದಾಳಿ ನಡೆಸಿದ ಪರಿಣಾಮ ಭಕ್ತಾದಿಗಳು ಮೃತಪಟ್ಟಿದ್ದರಿಂದ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಕಳೆದ ಫೆಬ್ರವರಿ 5ರಿಂದ ನಾಗಮಲೆ ಕ್ಷೇತ್ರಕ್ಕೆ ಜೀಪ್ ಮುಖಾಂತರ ಹಾಗೂ ಪಾದಯಾತ್ರೆಯ ಮೂಲಕ ಭಕ್ತಾದಿಗಳು ತೆರಳಲು ನಿರ್ಬಂಧ ವಿಧಿಸಲಾಗಿತ್ತು.
ಪ್ರತಿದಿನ 200 ಮಂದಿಗೆ ಅವಕಾಶ:ನಾಗಮಲೆಗೆ ಚಾರಣಕ್ಕೆ ತೆರಳಲು ಅರಣ್ಯ ಇಲಾಖೆಯ www.aranyavihaara.karanataka.gov.inಗೆ ಭೇಟಿ ನೀಡಿ ನೋಂದಾಯಿಸಿಕೊಂಡು, ನಂತರ ದಿನಾಂಕ ನಿಗದಿ ಮಾಡಿಕೊಂಡು ದರ್ಶನ ಪಡೆಯಬಹುದಾಗಿದೆ. ಭಕ್ತಾದಿಗಳಿಗೆ ಹಾಗೂ ಚಾರಣಿಗರಿಗೆ ಬೆಳಗ್ಗೆ 6ರಿಂದ 10 ಗಂಟೆಯ ತನಕದ ಸ್ಲಾಟ್ ಬುಕಿಂಗ್ಗೆ ಅವಕಾಶ ನೀಡಲಾಗಿದೆ. ಒಬ್ಬರಿಗೆ 200 ರೂ. ನಿಗದಿ ಮಾಡಲಾಗಿದೆ.
ನಾಗಮಲೆ ಯಾತ್ರೆಯು 14 ಕಿ.ಮೀ.ಗಳಷ್ಟಿದ್ದು, ಹಳೆಯೂರು ಗೇಟ್ನಿಂದ ಚಾರಣ ಆರಂಭಗೊಳ್ಳಲಿದೆ. ಜೊತೆಗೆ ಗೈಡ್ ಕೂಡ ಇರಲಿದ್ದಾರೆ. ಅರಣ್ಯ ಇಲಾಖೆಯಿಂದ ಪ್ರಾಯೋಗಿಕವಾಗಿ ಒಂದು ದಿನಕ್ಕೆ 200 ಜನರಿಗೆ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರಿಗೆ ಅವಕಾಶ ಮಾಡಿಕೊಡುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.