ಕರ್ನಾಟಕ

karnataka

ರಾಜವಂಶಸ್ಥನಿಗೆ ಒಲಿದ ಪ್ರಜಾಪ್ರಭುತ್ವದ ಅಧಿಕಾರ: ಹೆಚ್ಚು ಅಂತರದೊಂದಿಗೆ ಯದುವೀರ್ ಒಡೆಯರ್​ಗೆ ಗೆಲುವು - Yaduveer Wadiyar

By ETV Bharat Karnataka Team

Published : Jun 4, 2024, 9:13 AM IST

Updated : Jun 4, 2024, 4:33 PM IST

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಹಾರಾಜ ಯದುವೀರ್ ಒಡೆಯರ್ ಗೆಲುವಿನ ನಗೆ ಬೀರಿದ್ದಾರೆ.

mysuru-loksabha-constituency
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್ ಒಡೆಯರ್ ಗೆಲುವು (ETV Bharat)

ಮೈಸೂರು ಲೋಕಸಭಾ ಕ್ಷೇತ್ರ:ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟಾಗಿದ್ದು, ರಾಜವಂಶಸ್ಥನಿಗೆ ಪ್ರಜಾಪ್ರಭುತ್ವದ ಅಧಿಕಾರ ಒಲಿದಿದೆ. ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ಬಿಜೆಪಿಯಿಂದ ಕಣಕ್ಕಿಳಿದ ಯದುವೀರ್‌ ಒಡೆಯರ್​ ಭರ್ಜರಿ ಜಯ ಗಳಿಸಿದ್ದಾರೆ. ಎಣಿಕೆಯ ಯಾವ ಹಂತದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್‌ ಸ್ಪರ್ಧೆ ಕೊಡದೇ ಹೀನಾಯ ಸೋಲು ಕಂಡಿದ್ದಾರೆ. ಜಾತಿ ಲೆಕ್ಕಾಚಾರ ಮೀರಿ ಯದುವೀರ್ ವಿಜಯ ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಯದುವೀರ್ ವಿಜಯ:

  • ಬಿಜೆಪಿ ಅಭ್ಯರ್ಥಿ ಯದುವೀರ್ -7,95,503ಮತಗಳು.
  • ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ -6,56,241 ಮತಗಳು.
  • ಅಂತರ:1,39,262 ಮತಗಳು.

ಯದುವೀರ್ ಒಡೆಯರ್ 1,39,262 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ, ಬಿಜೆಪಿ ಪಕ್ಷದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಬಿಜೆಪಿ ಸಂಸದರುಗಳಲ್ಲಿ ಅತಿ ಹೆಚ್ಚು ಲೀಡ್ ಪಡೆದ ಖ್ಯಾತಿಗೆ ಯದುವೀರ್ ಪಾತ್ರರಾಗಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್ ಸೇರಿ ಒಟ್ಟು ಐದು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಎರಡು ಬಾರಿ ಸಿ.ಹೆಚ್ ವಿಜಯ್‌ಶಂಕರ್, ಎರಡು ಬಾರಿ ಪ್ರತಾಪ್ ಸಿಂಹ ಗೆಲುವು ಕಂಡಿದ್ದರು. ಇದೀಗ ಯದುವೀರ್ ಗೆಲುವಿನ ನಗೆ ಬೀರಿದ್ದಾರೆ.

ಕಳೆದ ಬಾರಿ ಪ್ರತಾಪ್ ಸಿಂಹ 1,38,647 ಮತಗಳ ಲೀಡ್​ನಲ್ಲಿ ಗೆದ್ದಿದ್ದರು. ಇದೀಗ 1,39,232 ಅಂತರದಿಂದ ಬಿಜೆಪಿ ದಾಖಲೆ ಬರೆದಿದೆ.

2019ರ ಗೆಲುವಿನ ಮಾಹಿತಿ

  • ಪ್ರತಾಪ್ ಸಿಂಹ: 6,88,974 ಮತಗಳು.
  • ಕಾಂಗ್ರೆಸ್​​​ನಿಂದ ಸ್ಪರ್ಧೆಗಿಳಿದಿದ್ದ ವಿಜಯಶಂಕರ್ ಗಳಸಿದ್ದ ಮತಗಳು: 5,50,327.
  • ಗೆಲುವಿನ ಅಂತರ: 1,38,647 ಮತಗಳು.

ಗೆಲುವಿನತ್ತ ಯದುವೀರ್ ದಾಪುಗಾಲು ಹಾಕುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೂತನ ಸಂಸದರ ನಾಮಫಲಕ ಹರಿದಾಡಲು ಶುರುವಾಯಿತು. 80 ಸಾವಿರ ಲೀಡ್ ಬರುತ್ತಿದ್ದಂತೆ ನಾಮಫಲಕ ಯದುವೀರ್ ಅಭಿಮಾನಿಗಳು ನಾಮಫಲಕ ಮಾಡಿಸಿದ್ದಾರೆ. ಯದುವೀರ್ ಸಂಸದರು ಎಂಬ ನಾಮಫಲಕಕ್ಕೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಲಾಗಿದೆ.

ಚುನಾವಣಾ ಘೋಷಣೆಯಾದ ದಿನದಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ರೋಡ್​ ಶೋ ನಡೆಸುವ ಮೂಲಕ ಮತದಾರರ ಗಮನ ಸೆಳೆದಿದ್ದರು. ಕೇಸರಿ ಅಭ್ಯರ್ಥಿ ಮಹಾರಾಜ ಯದುವೀರ್ ಒಡೆಯರ್ ಪರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಚಾರ ನಡೆಸಿದ್ದರೆ, ಕಾಂಗ್ರೆಸ್​ ಅಭ್ಯರ್ಥಿ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಭದ್ರತೆ:ಫಲಿತಾಂಶದ ಹಿನ್ನೆಲೆ, ಮತ ಎಣಿಕೆ ಕೇಂದ್ರ ಮತ್ತು ನಗರದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಹಿರಿಯ ಪೊಲೀಸ್​ ಅಧಿಕಾರಿಗಳು ಸೇರಿದಂತೆ ಎಸಿಪಿಗಳು, ಸಿಪಿಐ, ಪಿಎಸ್ಐ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಣಿಕೆ ಕೇಂದ್ರ ಸೇರಿದಂತೆ ಎಲ್ಲಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ತೀವ್ರ ನಿಗಾ ವಹಿಸಲಾಗಿದೆ.

ಕಳೆದ ಎರಡು ಬಾರಿ ಕ್ಷೇತ್ರವನ್ನು ಗೆದ್ದುಕೊಂಡಿದ್ದ ಬಿಜೆಪಿ, ಈಗ ಹ್ಯಾಟ್ರಿಕ್ ಸಾಧನೆಯ ಖುಷಿಯಲ್ಲಿದೆ. ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಮಡಿಕೇರಿ, ವಿರಾಜಪೇಟೆ ಕ್ಷೇತ್ರದ ಒಟ್ಟು 8 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.

ಮತದಾರರ ಮಾಹಿತಿ:ನಡೆದ ಚುನಾವಣೆಯಲ್ಲಿ ಸೇವಾ ಮತದಾರರು ಸೇರಿದಂತೆ ಕ್ಷೇತ್ರದ ಒಟ್ಟು 20,94,310 ಮತದಾರರಲ್ಲಿ 10,26,324 ಪುರುಷರು, 10,65,714 ಮಹಿಳೆಯರು, 184 ಇತರೆ, 2,088 ಸೇವಾ ಮತದಾರನ್ನು ಹೊಂದಿದೆ. 2019ರಲ್ಲಿ ಚುನಾವಣೆಯಲ್ಲಿ ಶೇ. 66.96ರಷ್ಟು ಮತದಾನದ ಪ್ರಮಾಣ ದಾಖಲಾಗಿದ್ದರೆ, 2024ರ ಚುನಾವಣೆಯಲ್ಲಿ ಶೇ. 69.21ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಲೋಕಸಭಾ ಚುನಾವಣೆಗಳು ದೇಶದಲ್ಲಿ ಒಟ್ಟು ಏಳು ಹಂತದಲ್ಲಿ ನಡೆದಿದ್ದು, ರಾಜ್ಯದ ಮೊದಲ ಹಂತದಲ್ಲಿ ಈ ಕ್ಷೇತ್ರಕ್ಕೆ ಮತದಾನ ನಡೆದಿತ್ತು.

ಇದನ್ನೂ ಓದಿ:ಪರಿಷತ್ ಚುನಾವಣೆ: ಕಾಂಗ್ರೆಸ್‌ನ 7 ಅಭ್ಯರ್ಥಿಗಳ ಆಸ್ತಿ ವಿವರ ಹೀಗಿದೆ - Congress Candidates Asset Details

Last Updated : Jun 4, 2024, 4:33 PM IST

ABOUT THE AUTHOR

...view details