ಮೈಸೂರು:ಸಾಲ ತೀರಿಸಿದ ನಂತರವೂ ಸ್ವತ್ತಿನ ದಾಖಲೆಗಳನ್ನು ಹಿಂದಿರುಗಿಸದೇ ಸೇವಾ ನ್ಯೂನತೆ ಎಸಗಿದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಮೈಸೂರು ಜಿಲ್ಲಾ ಗ್ರಾಹಕರ ಆಯೋಗವು ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಒಂದು ತಿಂಗಳೊಳಗೆ ಈ ಹಣ ನೀಡಬೇಕು ಎಂದು ಸೂಚಿಸಿರುವ ಆಯೋಗವು ತಪ್ಪಿದಲ್ಲಿ ಸದರಿ ಮೊತ್ತಕ್ಕೆ ವಾರ್ಷಿಕ 9ರಷ್ಟು ಬಡ್ಡಿ ಭರಿಸಬೇಕೆಂದೂ ತಿಳಿಸಿದೆ.
ಮೈಸೂರಿನ ರಾಮಕೃಷ್ಣ ನಗರದ ನಿವಾಸಿ ಎಸ್.ರಾಜೇಶ್ವರಿ ತಮ್ಮ ಮನೆಯ ದಾಖಲೆಗಳನ್ನು ಆಧಾರವಾಗಿ ನೀಡಿ ಇಲ್ಲಿನ ರಮಾವಿಲಾಸ ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲವನ್ನು ಪಡೆದಿದ್ದರು. ರಾಜೇಶ್ವರಿ 2020ರ ಸೆಪ್ಟೆಂಬರ್ 9ರಂದು ಮೃತಪಟ್ಟರು. ಇದಕ್ಕೂ ಮೊದಲು ಪತಿ ನಾರಾಯಣ ಸ್ವಾಮಿ ಸಾವನ್ನಪ್ಪಿದ್ದರು. ಆದರೆ, ಈ ದಂಪತಿಗೆ ಮಕ್ಕಳಿರಲಿಲ್ಲ.
ರಾಜೇಶ್ವರಿ ತಮ್ಮ ಕಾಲಾನಂತರ ದಟ್ಟಗಳ್ಳಿಯಲ್ಲಿರುವ ಮನೆಯು ಸಂಬಂಧಿಕರಾದ ಬಿ.ಆರ್.ವೆಂಕಟೇಶ್ ಪ್ರಸಾದ್ ಹಾಗೂ ಆರ್.ಅಶ್ವಿನಿ ಅವರಿಗೆ ಸೇರತಕ್ಕದ್ದು ಎಂದು ಉಯಿಲು ರಚಿಸಿ ನೋಂದಾಯಿಸಿದ್ದರು. ಈ ಸ್ವತ್ತಿನ ಖಾತೆಯು ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿ ಅವರ ಹೆಸರಿಗೆ ಬದಲಾಗಿ ಇವರಿಬ್ಬರ ಸ್ವತ್ತಿನ ಬಾಬ್ತು ತೆರಿಗೆಯನ್ನೂ ಪಾವತಿಸುತ್ತಿದ್ದರು. ರಾಜೇಶ್ವರಿ ಬ್ಯಾಂಕಿನಿಂದ ಸಾಲ ಪಡೆದ ವಿಚಾರ ತಿಳಿದು ಬ್ಯಾಂಕ್ಗೆ ತೆರಳಿ ಉಯಿಲು ಹಾಗೂ ಖಾತೆ ಬದಲಾವಣೆ ಆದ ಬಗ್ಗೆ ಮಾಹಿತಿ ನೀಡಿದ್ದರು.
ಇದಕ್ಕೆ ರಾಜೇಶ್ವರಿ ಮಾಡಿದ್ದ ಸಾಲದ ಮೊತ್ತವನ್ನು ಪೂರ್ತಿ ಮರುಪಾವತಿ ಮಾಡಿದರೆ, ಸ್ವತ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಿಂದಿರುಗಿಸುವುದಾಗಿ ಬ್ಯಾಂಕ್ನ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಈ ಮೇರೆಗೆ ವೆಂಕಟೇಶ್ ಪ್ರಸಾದ್ ಹಾಗೂ ಅಶ್ವಿನಿ ಸಾಲದ ಪೂರ್ತಿ ಮೊತ್ತ ಮರುಪಾವತಿ ಮಾಡಿದ್ದರು. ಅಂತೆಯೇ, ಬ್ಯಾಂಕ್ನವರು ಸಾಲ ಚುಕ್ತಾ ಆಗಿದೆಯೆಂದು 2020ರ ಅಕ್ಟೋಬರ್ 29ರಂದು ಪತ್ರ ನೀಡಿದ್ದರು. ಪೂರ್ತಿ ಸಾಲ ತೀರಿಸಿರುವುದರಿಂದ ಮನೆಯ ದಾಖಲೆ ಪತ್ರಗಳನ್ನು ಹಿಂದಿರುಗಿಸುವಂತೆ ಕೋರಿಕೊಂಡಾಗ ಬ್ಯಾಂಕ್ ಕಾನೂನು ಸಲಹೆಗಾರರ ಸಲಹೆ ಪಡೆದು ದಾಖಲೆಗಳನ್ನು ಹಿಂದಿರುಗಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟಿದ್ದರು.