ಕರ್ನಾಟಕ

karnataka

ETV Bharat / state

ಜಂಬೂ ಸವಾರಿಯಲ್ಲಿ ಕುದುರೆ ಸವಾರಿ ಮಾಡಿದ ಪ್ರಾದೇಶಿಕ ಆಯುಕ್ತರು - MYSURU DASARA

ದಸರಾ ಜಂಬೂ ಸವಾರಿಯಲ್ಲಿ ಇದೇ ಮೊದಲ ಬಾರಿಗೆ ಪ್ರಾದೇಶಿಕ ಆಯುಕ್ತರು ಕುದುರೆ ಸವಾರಿ ಮಾಡಿ ಗಮನ ಸೆಳೆದರು.

ಕುದುರೆ ಸವಾರಿ ಮಾಡಿದ ಪ್ರಾದೇಶಿಕ ಆಯುಕ್ತರು
ಕುದುರೆ ಸವಾರಿ ಮಾಡಿದ ಪ್ರಾದೇಶಿಕ ಆಯುಕ್ತರು (ETV Bharat)

By ETV Bharat Karnataka Team

Published : Oct 12, 2024, 8:43 PM IST

ಮೈಸೂರು:ವಿಶ್ವವಿಖ್ಯಾತ ಜಂಬೂಸವಾರಿ ಅದ್ಧೂರಿಯಾಗಿ ನೆರವೇರಿತು. ಗಜಪಡೆ ಕ್ಯಾಪ್ಟನ್ ಅಭಿಮನ್ಯು 5ನೇ ಬಾರಿ ಅಂಬಾರಿ ಹೊತ್ತು ಸಾಗಿತು. ರಸ್ತೆಯ ಬದಿಯಲ್ಲಿ ಸಾವಿರಾರು ಜನ ನಿಂತು ಗಜಪಡೆಯ ಮೆರವಣಿಗೆ ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ನಡೆದ ವಿಭಿನ್ನ ಸ್ತಬ್ಧಚಿತ್ರ ಮತ್ತು ಕಲಾತಂಡಗಳ ಪ್ರದರ್ಶನವೂ ಜನರನ್ನು ಆಕರ್ಷಿಸಿತು. ಹಾಗೆಯೇ ಪ್ರಾದೇಶಿಕ ಆಯುಕ್ತ ಡಿ.ಎಸ್.ರಮೇಶ್ ಅವರು ಜಂಬೂ ಸವಾರಿ ಮೆರವಣಿಗೆಯಲ್ಲಿ ಕುದರೆ ಸವಾರಿ ಮಾಡಿ ಗಮನ ಸೆಳೆದರು.

ಹೌದು, ಮೈಸೂರು ಮಹಾನಗರ ಪಾಲಿಕೆಗೆ ಮೇಯರ್ ಇಲ್ಲದ ಕಾರಣ ಇದೇ ಮೊದಲ ಬಾರಿಗೆ ಅಧಿಕಾರ ವರ್ಗದವರು ಜಂಬೂ ಸವಾರಿಯಲ್ಲಿ ಕುದುರೆ ಸವಾರಿ ಮಾಡಿದರು. ಜಂಬೂಸವಾರಿ ಮೆರವಣಿಗೆಯಲ್ಲಿ ಮೈಸೂರು ಪ್ರಥಮ ಪ್ರಜೆಯಾದ ಮೈಸೂರು ನಗರ ಪಾಲಿಕೆ ಮೇಯರ್ ಹಾಗೂ ಜಿ.ಪಂ ಅಧ್ಯಕ್ಷರು ಕುದುರೆ ಸವಾರಿ ಮಾಡಿಕೊಂಡು ಹೋಗುವುದು ಸಂಪ್ರದಾಯವಾಗಿದೆ. ಆದರೆ, ನಗರದ ಪಾಲಿಕೆಯ ಅವಧಿ ಮುಗಿದು 11 ತಿಂಗಳು ಕಳೆದಿದ್ದು, ಈವರೆಗೆ ಮತ್ತೆ ಚುನಾವಣೆ ನಡೆದಿಲ್ಲ.

ಕುದುರೆ ಸವಾರಿ ಮಾಡಿದ ಮೊದಲ ಅಧಿಕಾರಿ:ಜೊತೆಗೆ ದಸರಾದಲ್ಲಿ ಮೊದಮೊದಲು ನಗರ ಪಾಲಿಕೆ ಮೇಯರ್‌ಗೆ ಮಾತ್ರ ಕುದುರೆ ಸವಾರಿ ಅವಕಾಶವಿತ್ತು. ನಂತರದ ವರ್ಷಗಳಲ್ಲಿ ಜಿ.ಪಂ ಅಧ್ಯಕ್ಷರಿಗೂ ಕುದುರೆ ಸವಾರಿ ಭಾಗ್ಯ ಸಿಕ್ಕಿತ್ತು. ಆದರೆ ಜಿಲ್ಲಾ ಪಂಚಾಯಿತಿ ಚುನಾವಣೆಯೂ ನಡೆಯದ ಕಾರಣ ಅಧ್ಯಕ್ಷ ಹುದ್ದೆಯೂ ಖಾಲಿ ಇತ್ತು. ಪರಿಣಾಮವಾಗಿ ಪ್ರಾದೇಶಿಕ ಆಯುಕ್ತರು ಹಾಗೂ ನಗರ ಪಾಲಿಕೆಯ ಅಡಳಿತಾಧಿಕಾರಿಯಾಗಿರುವ ಡಿ.ಎಸ್. ರಮೇಶ್ ಅವರು ಕುದುರೆ ಸವಾರಿ ಮಾಡಿದರು.

ನಾಲ್ಕು ದಶಕಗಳ ನಂತರ ಇದೇ ಮೊದಲ ಬಾರಿಗೆ ಮೇಯರ್ ಇಲ್ಲದೇ ಕುದುರೆ ಸವಾರಿದ ಮಾಡಿದ ಮೊದಲ ಅಧಿಕಾರಿಯಾಗಿದ್ದಾರೆ. ಪ್ರತಿ ಬಾರಿ ಮೇಯರ್​​ಗೆ ಕುದುರೆ ಸವಾರಿ ತರಬೇತಿ ನೀಡುತ್ತಿದ್ದ ಅಶ್ವರೋಹಿ ಪಡೆಯು, ಈ ಬಾರಿಗೆ ಅಧಿಕಾರಿಗೆ ತರಬೇತಿ ನೀಡಿತ್ತು.

ಚಾಮುಂಡೇಶ್ವರಿಗೆ ಸಿಎಂ ಪುಷ್ಪಾರ್ಚನೆ:ಶನಿವಾರ ಸಂಜೆ 4 ರಿಂದ 4.30 ರ ಶುಭ ಕುಂಭ ಲಗ್ನದಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಬೇಕಿತ್ತು. ಆದರೆ ತಡವಾಗಿ 5 ಗಂಟೆ 02 ನಿಮಿಷಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಆ ನಂತರ ಜಂಬೂಸವಾರಿಯ ಮುಂದೆ ಪೊಲೀಸರ ಪಥ ಸಂಚಲನ, ಅಶ್ವದಳ, ಪೊಲೀಸ್‌ ವಾದ್ಯ ವೃಂದವು ಜಂಬೂಸವಾರಿಯ ಮುಂದೆ ಸಾಗಿತು. ಸುಮಾರು 5 ಕಿ.ಮೀ ದೂರದ ಜಂಬೂಸವಾರಿ ನೇತೃತ್ವವನ್ನು 58 ವರ್ಷದ ಅಭಿಮನ್ಯು ಐದನೇ ಬಾರಿ ನಿರ್ವಹಿಸಿ ಸೈ ಎನಿಸಿಕೊಂಡಿತು.

ಇದನ್ನೂ ಓದಿ:ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; 5ನೇ ಬಾರಿಗೆ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು

ABOUT THE AUTHOR

...view details