ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸಲು ವಿವಿಧ ಆನೆ ಶಿಬಿರಗಳಿಂದ ಅರಮನೆಗೆ ಆಗಮಿಸಿರುವ ಗಜಪಡೆ, ಅರಮನೆಯ ತಾತ್ಕಾಲಿಕ ಶೆಡ್ನಲ್ಲಿ ವಾಸ್ತವ್ಯ ಹೂಡಿವೆ. ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ನಿಶಾನೆ ಆನೆಯಾಗಿ ಆಯ್ಕೆಯಾಗಿರುವ ಭೀಮ, ರಾಂಪುರ ಆನೆ ಶಿಬಿರದಿಂದ ಆಗಮಿಸಿರುವ ಲಕ್ಷ್ಮೀ ಆನೆ ಜತೆ ತುಂಟಾಟದಲ್ಲಿ ತೊಡಗಿದೆ. ಇದರ ಅಪರೂಪದ ವಿಡಿಯೋ ಇಲ್ಲಿದೆ.
ದಸರಾ ಗಜಪಡೆಯ ಈ ವರ್ಷದ ಪ್ರಮುಖ ಆಕರ್ಷಣೆ ಎಂದರೆ ಭೀಮ. ಅಕಾಲಿಕ ಮರಣವನ್ನಪ್ಪಿದ ಅರ್ಜನನ ಸ್ಥಾನವನ್ನು ಈ ಬಾರಿಯ ದಸರಾ ಮಹೋತ್ಸವದಲ್ಲಿ ಭೀಮ ತುಂಬುತ್ತಾನೆ ಎಂಬ ವಿಶ್ವಾಸ ಮೂಡಿಸಿದ್ದಾನೆ. ತಾಲೀಮು ಮುಗಿಸಿದ ನಂತರ ಗಂಡು ಆನೆಗಳು, ಹೆಣ್ಣು ಆನೆಗಳೊಂದಿಗೆ ತುಂಟಾದಲ್ಲಿ ತೊಡಗಿರುವ ದೃಶ್ಯ ನೋಡುಗರ ಗಮನ ಸೆಳೆಯುತ್ತಿದೆ.
ಭೀಮ ಮತ್ತು ಲಕ್ಷ್ಮಿ ಆನೆಗಳನ್ನು ಅಕ್ಕ ಪಕ್ಕದಲ್ಲೇ ಕಟ್ಟಿ ಹಾಕಲಾಗಿದ್ದು, ಭೀಮ ಆನೆಯು ಲಕ್ಷ್ಮಿ ಆನೆಯನ್ನು ತನ್ನ ಸೊಂಡಲಿನ ಸಹಾಯದಿಂದ ತಬ್ಬಿ ನಿಂತಿರುವುದು ವಿಶೇಷವಾಗಿತ್ತು. ಅತ್ಯಂತ ಪ್ರೀತಿಯ ಮನೋಭಾವದಿಂದ ಎರಡು ಆನೆಗಳು ಒಂದಕ್ಕೊಂದು ಆಟವಾಡಿಕೊಂಡು ಜೋಡಿಯಾಗಿ ನಿಂತಿರುವುದು. ಭೀಮ ಆನೆಯು ತನ್ನ ಸೊಂಡಿಲನ್ನು ಲಕ್ಷ್ಮಿ ಆನೆಯ ಭುಜದ ಮೇಲೆ ಹಾಕಿ ತನ್ನತ್ತ ಎಳೆದುಕೊಂಡು ಅದರ ಹೊಟ್ಟೆ ಮೇಲೆ ಸೊಂಡಿಲಿಟ್ಟು ಮಲಗುವ ದೃಶ್ಯ ನೋಡುಗರಿಗೆ ವಿಶೇಷವಾಗಿತ್ತು.