ಮೈಸೂರು: ಮೈಸೂರು ದಸರಾ ಆಚರಣೆಯ ಭಾಗವಾಗಿ ಸ್ತಬ್ಧಚಿತ್ರ ಉಪಸಮಿತಿ ವತಿಯಿಂದ ನಾವೀನ್ಯತೆ ಮತ್ತು ಭವಿಷ್ಯಾತ್ಮಕ ಕಲ್ಪನೆಯುಳ್ಳ ಕಿರು ಸ್ತಬ್ಧಚಿತ್ರ ತಯಾರಿಸುವ ಸ್ಪರ್ಧೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ಪರ್ಧೆಯು ಸಾಂಸ್ಕೃತಿಕವಾಗಿ ಶ್ರೀಮಂತ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ವಿನ್ಯಾಸಗಳನ್ನು ರಚಿಸುವಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಅತ್ಯುತ್ತಮ ವಿನ್ಯಾಸವನ್ನು ಪೂರ್ಣಪ್ರಮಾಣದ ಸ್ತಬ್ಧಚಿತ್ರವಾಗಿ ಪರಿವರ್ತಿಸಲಾಗುವುದು ಮತ್ತು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುವುದು.
ಭಾಗವಹಿಸುವವರು ಭಾರತೀಯ ನಾಗರಿಕರಾಗಿದ್ದು, ವೈಯಕ್ತಿಕವಾಗಿ ಅಥವಾ ತಂಡವಾಗಿಯೂ (ತಂಡದಲ್ಲಿ ಗರಿಷ್ಟ 4 ಸದಸ್ಯರು) ಪಾಲ್ಗೊಳ್ಳಬಹುದು. ಪ್ರತಿ ಸ್ಪರ್ಧಿ ಅಥವಾ ತಂಡ ಒಂದು ಪ್ರವೇಶವನ್ನು ಮಾತ್ರ ಸಲ್ಲಿಸಬಹುದು. ಸ್ಪರ್ಧಿಗಳು ಸೆಪ್ಟೆಂಬರ್ 13ರೊಳಗೆ https://forms.gle/Ep9Ab2Ghi2dx8NiKA ಅರ್ಜಿ ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕು.
ಮಾರ್ಗಸೂಚಿಗಳು: ಕಿರು ಸ್ತಬ್ಧಚಿತ್ರವು ಕರ್ನಾಟಕ ಅಥವಾ ಭಾರತದ ಸಾಂಸ್ಕೃತಿಕ, ಐತಿಹಾಸಿಕ ಅಥವಾ ಸಾಮಾಜಿಕ ಅಂಶಗಳನ್ನು, ಭವಿಷ್ಯಾತ್ಮಕ ಅಂಶಗಳನ್ನು ಪ್ರತಿಬಿಂಬಿಸಬೇಕು. ಸ್ಪರ್ಧೆಗೆ ಸಲ್ಲಿಸುವ ವಿನ್ಯಾಸವು ಮೂಲತಃ ಹೊಸದಾಗಿರಬೇಕು. ಹಿಂದಿನ ಯಾವುದೇ ಸ್ಪರ್ಧೆಗೆ ಸಲ್ಲಿಸಿರಬಾರದು. ಗರಿಷ್ಟ 60x60x60 ಸೆಂ.ಮೀ. ಆಯಾಮಗಳನ್ನು ಹೊಂದಿರಬೇಕು. ಪರಿಸರಸ್ನೇಹಿ ಮತ್ತು ನಾವೀನ್ಯ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಕಿರು ಸ್ತಬ್ಧಚಿತ್ರ ಸದೃಢವಾಗಿ ಸ್ವಯಂ ಬೆಂಬಲಿತವಾಗಿಯೂ ಇರಬೇಕು.