ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿದ್ದು, ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಮುಷ್ಠಿ ಕಾಳಗಕ್ಕೆ ಚಾಮರಾಜನಗರದ ಜಟ್ಟಿ ನಿತ್ಯ ಬೆವರು ಹರಿಸುತ್ತಿದ್ದಾರೆ. ಮುಷ್ಠಿ ಕಾಳಗಕ್ಕೆ ತಾನು ರೆಡಿ ಎನ್ನುತ್ತಿದ್ದಾರೆ ಪೈಲ್ವಾನ್ ಶ್ರೀನಿವಾಸ್ ಜಟ್ಟಿ.
ನಾಡಹಬ್ಬ ದಸರಾದ ವಿಜಯದಶಮಿ ದಿನದಂದು ಮೈಸೂರಿನ ಅಂಬಾ ವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುವ ಮೈನವಿರೇಳಿಸುವ ವಜ್ರಮುಷ್ಠಿ ಕಾಳಗಕ್ಕೆ ಚಾಮರಾಜನಗರದ ಶ್ರೀನಿವಾಸ ಜಟ್ಟಿ ಸಜ್ಜುಗೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಚಾಮರಾಜನಗರದ ದೊಡ್ಡ ಗರಡಿಯಲ್ಲಿ ತರಬೇತುದಾರ ಪುಟ್ಟಣ್ಣ ಜಟ್ಟಿ ಅವರಿಂದ ಶ್ರೀನಿವಾಸ್ ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ 2 ಬಾರಿ ಮುಷ್ಠಿ ಕಾಳಗದಲ್ಲಿ ಭಾಗವಹಿಸಿರುವ ಅನುಭವ ಇವರಿಗಿದೆ.
ದಸರಾ ಮಹೋತ್ಸವದಲ್ಲಿ ವಜ್ರಮುಷ್ಠಿ ಕಾಳಗಕ್ಕೆ ಅತ್ಯಂತ ಮಹತ್ವವಿದೆ. ವಿಜಯದಶಮಿ ದಿನ ನಡೆಯುವ ಜಂಬೂ ಸವಾರಿಗೂ ಮೊದಲು ರಾಜ ಮನೆತನದವರ ಸಮ್ಮುಖದಲ್ಲಿ ಈ ಕಾಳಗ ನಡೆಯುತ್ತದೆ. ಸಂಪ್ರದಾಯದ ಉದ್ದೇಶದಿಂದ ನಡೆಯುವ ಈ ಕಾಳಗ ಕೆಲವೇ ಸೆಕೆಂಡುಗಳಲ್ಲಿ ಮುಗಿಯುತ್ತದೆ. ಆದರೂ, ಈ ಕಾಳಗವನ್ನು ವೀಕ್ಷಿಸಲು ಜನರ ದಂಡೇ ನೆರೆಯುತ್ತದೆ. ಜಟ್ಟಿ ಜನಾಂಗಕ್ಕೆ ಸೇರಿದ ನಾಲ್ವರು ಪೈಲ್ವಾನರು ವಜ್ರಮುಷ್ಠಿ ಕಾಳಗ ಮಾಡುತ್ತಾರೆ. ಕೈಯಲ್ಲಿ ದಂತದ ನಖವನ್ನು ಧರಿಸಿ ಮಾಡುವ ಈ ಹೊಡೆದಾಟದಲ್ಲಿ ಯಾರಾದರೂ ಒಬ್ಬ ಜಟ್ಟಿಯ ತಲೆಯಲ್ಲಿ ರಕ್ತ ಸುರಿಯಲು ಆರಂಭವಾದ ತಕ್ಷಣ ಕಾಳಗವನ್ನು ಮುಕ್ತಾಯ ಮಾಡಲಾಗುತ್ತದೆ.