ಮೈಸೂರು: ಕೂಲಿ ಕೆಲಸ ಮಾಡಿಕೊಂಡು, ತಮ್ಮ ಹಾಗೂ ದಾನಿಗಳ ನೆರವಿನಿಂದ ಗ್ರಂಥಾಲಯ ಸ್ಥಾಪಿಸಿ, ಜನರ ಮನ ಗೆದ್ದ ಸಯ್ಯದ್ ಇಸಾಕ್ ಅವರಿಗೆ ಈಗ ಗ್ರಂಥಾಲಯ ನಡೆಸಲು ಹಣಕಾಸಿನ ಸಮಸ್ಯೆ ಎದುರಾಗಿದೆ.
ಸತತ 14 ವರ್ಷಗಳ ಕಾಲ ಗ್ರಂಥಾಲಯವನ್ನು ಮುನ್ನಡೆಸಿದ ಸಯ್ಯದ್ ಇಸಾಕ್ ಈ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಲಾಗದ ಪರಿಸ್ಥಿತಿಗೆ ಬಂದಿದ್ದಾರೆ. ರಾಜೀವ್ ನಗರದ ಎರಡನೇ ಹಂತದ ಉದ್ಯಾನವನದ ಸಮೀಪ 2011ರ ನವೆಂಬರ್ 1ರಂದು ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಿ, ಸುತ್ತಮುತ್ತಲ ನಿವಾಸಿಗಳ ಹಾಗೂ ಮೈಸೂರಿನ ಮನೆಮಾತಾಗಿದ್ದ ಸಯ್ಯದ್ ಇಸಾಕ್ ಅವರಿಗೆ ಹಣಕಾಸಿನ ತೊಂದರೆಯ ಜೊತೆಗೆ ಅನಾರೋಗ್ಯದ ಸಮಸ್ಯೆಯೂ ಎದುರಾಗಿದೆ. ಹಾಗಾಗಿ ತಾವು ನಡೆಸುತ್ತಿರುವ ಗ್ರಂಥಾಲಯಕ್ಕೆ ಯಾರಾದರೂ ಸಹಾಯಹಸ್ತ ಚಾಚಿದರೆ, ಇನ್ನಷ್ಟು ದೂರ ಗ್ರಂಥಾಲಯದ ಸೇವೆಯನ್ನು ವಿಸ್ತರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಮುಸ್ಲಿಂ ಬಾಹುಳ್ಯವುಳ್ಳ ರಾಜೀವ್‌ನಗರದಲ್ಲಿ ಕನ್ನಡ ಪುಸ್ತಕಪ್ರೇಮಿಯಾಗಿರುವ ಸಯ್ಯದ್ ಇಸಾಕ್ ಸ್ಥಾಪಿಸಿದ ಗ್ರಂಥಾಲಯಕ್ಕೆ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪುಸ್ತಕಗಳು ಹಾಗೂ ಪ್ರತಿಕೆಗಳನ್ನು ಓದಲು ಪ್ರತಿನಿತ್ಯ ನೂರಾರು ಮಂದಿ ಬರುತ್ತಾರೆ. ಇಲ್ಲಿನ ಗ್ರಂಥಾಲಯದಿಂದ ಅಕ್ಕಪಕ್ಕದ ನಿವಾಸಿಗಳಿಗೂ ಹಾಗೂ ವಿದ್ಯಾರ್ಥಿಗಳಿಗೂ ತುಂಬ ಅನುಕೂಲವಾಗಿದೆ.
2021ರಲ್ಲಿ ಬೆಂಕಿಗಾಹುತಿ: 2021ರ ಏಪ್ರಿಲ್ 9ರಂದು ಕಿಡಿಗೇಡಿಗಳು ಇಟ್ಟ ಬೆಂಕಿಗೆ ಗ್ರಂಥಾಲಯ ಸಂಪೂರ್ಣ ಸುಟ್ಟು ಕರಲಾಗಿತ್ತು. ದಾನಿಗಳ ನೆರವಿನಿಂದ ಬಂದ 3.45 ಲಕ್ಷ ರೂ., ಇತರೆ ಮೂಲಗಳಿಂದ ಬಂದ 1 ಲಕ್ಷ ರೂ. ನಿಂದ ಮತ್ತೆ ಗ್ರಂಥಾಲಯವನ್ನು ಮರುಸ್ಥಾಪನೆ ಮಾಡಲಾಗಿತ್ತು.