ಬೆಂಗಳೂರು:ರಾಜ್ಯದಲ್ಲಿನ ಒಂದು ನೂರು ರಾಮ ಮಂದಿರಗಳು ಮತ್ತು ಹನುಮ ದೇವಾಲಯಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆಯು ಬಜೆಟ್ನಲ್ಲಿ 100 ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದೆ.
ಅಯೊಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿತಂತ್ರವಾಗಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಹಿಂದೂ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಅನುಕೂಲವಾಗುವಂತೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿ ಅದರ ರಾಜಕೀಯ ಲಾಭ ಪಡೆಯಲು ಸಾಧ್ಯತೆಗಳಿರುವುದರಿಂದ, ಇದಕ್ಕೆ ಪ್ರತಿತಂತ್ರವಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕೂಡ ರಾಮ ಭಕ್ತರು ಮತ್ತು ಹಿಂದೂ ಸಮುದಾಯದ ಮತಗಳನ್ನು ಆಕರ್ಷಿಸಲು ಹಲವಾರು ಯೋಜನೆಗಳನ್ನು ರೂಪಿಸತೊಡಗಿದೆ.
ರಾಜ್ಯದಲ್ಲಿನ ನೂರು ರಾಮ ಮಂದಿರ ಮತ್ತು ಹನುಮ ದೇವಾಲಯಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ನೂರು ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಖಚಿತಪಡಿಸಿದ್ದಾರೆ. ಇದೇ ತಿಂಗಳ 16 ರಂದು ಮಂಡನೆಯಾಗುವ ಮುಂಗಡಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ಥಾವನೆ ಪ್ರಕಾರ ರಾಮಮಂದಿರಗಳ ಅಭಿವೃದ್ಧಿಗೆ ಯೋಜನೆ ಪ್ರಕಟಿಸಲಿದ್ದಾರೆಯೇ ಎನ್ನುವ ಕುತೂಹಲ ಇದೀಗ ಮೂಡಿದೆ.