ಹಾಸನ:ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ದೋಚಲು ಬಂದ ಖದೀಮರು, ಮಹಿಳೆಯ ಕೊಲೆಗೆ ಯತ್ನಿಸಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕತ್ತರಿಘಟ್ಟ ಗ್ರಾಮದಲ್ಲಿ ನಡೆದಿದೆ.
ಜು.8ರಂದು ಗ್ರಾಮದ ಸುಶೀಲಮ್ಮ ಎಂಬವರ ಮನೆಗೆ ಬೆಳಗ್ಗೆ 10 ಗಂಟೆಯ ವೇಳೆಗೆ 35ರಿಂದ 40 ವರ್ಷದ ಅಪರಿಚಿತನೊಬ್ಬ ಬಂದು ಬಾಗಿಲು ತಟ್ಟಿದ್ದಾನೆ. ಮನೆ ಮಾಲೀಕರಾದ ಸುಶೀಲಮ್ಮ ಬಾಗಿಲು ತೆರೆದಾಗ ಊಪಿನಹಳ್ಳಿ ರಾಜಣ್ಣ ಎಂಬವರ ಮನೆ ಎಲ್ಲಿ ಎಂದು ಕೇಳಿದ್ದಾನೆ. ಅದಕ್ಕೆ ನಮ್ಮ ಮನೆಯ ಹಿಂಭಾಗದಲ್ಲಿದೆ, ನೀವು ಅಲ್ಲಿಗೆ ಹೋಗಿ ಅವರನ್ನು ಕೇಳಿ ಎಂದು ಹೇಳಿದ್ದಾರೆ.
ತಕ್ಷಣವೇ ಮನೆಯ ಕಾಂಪೌಂಡ್ ಆಚೆಗೆ ನಿಂತಿದ್ದ ನಾಲ್ವರು ಓಡಿ ಬಂದು ಜೋರಾಗಿ ಬಾಗಿಲು ತಳ್ಳಿ, ಮನೆಯೊಳಗೆ ಸೇರಿಕೊಂಡಿದ್ದಾರೆ. ಇದರಿಂದ ಹೆದರಿದ ಸುಶೀಲಮ್ಮ, ಜೋರಾಗಿ ಕಿರುಚಿಕೊಳ್ಳಲು ಆರಂಭಿಸಿದ್ದಾರೆ. ಇದರಿಂದ ತಮ್ಮ ಕೃತ್ಯ ಬಯಲಾಗಲಿದೆ ಎಂದು ಹೆದರಿದ ದುಷ್ಕರ್ಮಿಗಳು ಮಹಿಳೆಯನ್ನು ತಳ್ಳಿ, ಮನೆಯಲ್ಲಿದ್ದ ಪಂಚೆಯಿಂದ ಕುತ್ತಿಗೆ ಬಿಗಿದು ಕೊಲೆಗೆ ಯತ್ನಿಸಿದ್ದಾರೆ.
ಇದೇ ವೇಳೆ ಮನೆಯ ಬಳಿ ಬಂದ ಸುಶೀಲಮ್ಮ ಅವರ ಭಾವ ದೇವರಾಜೇಗೌಡ ಎಂಬವರು, ಹೊರಗಡೆ ಕಾರಿನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು ಕಂಡು, ನೀನು ಯಾರು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಾನು ಕಿಕ್ಕೇರಿಯವನು, ಸ್ನೇಹಿತರ ಜೊತೆ ಸೇರಿ ತಂಗಿನ ಕಾಯಿ ಚಿಪ್ಪು ತೆಗೆದುಕೊಳ್ಳಲು ಬಂದಿದ್ದೇವೆ ಎಂದು ಉತ್ತರಿಸಿದ್ದಾನೆ. ಈ ಮನೆಯ ಅಮ್ಮ ಕೆಳಗಡೆ ಎಮ್ಮೆ ಕಟ್ಟಲು ಹೋಗಿದ್ದಾರೆ. ನಮ್ಮ ಕಡೆಯ ನಾಲ್ವರು ಅವರನ್ನು ಕರೆಯಲು ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ.
ಆದರೆ, ದೇವರಾಜೇಗೌಡರು ಮನೆ ಬಾಗಿಲು ಮುಚ್ಚಿದಂತೆ ಇದ್ದುದನ್ನು ನೋಡಿ ಸುಶೀಲಮ್ಮನನ್ನು ಕರೆದಿದ್ದಾರೆ. ಕೆಳಗಡೆ ಯಾರೂ ಕಾಣದಿದ್ದಾಗ ವಾಪಸ್ ಮನೆಯ ಹತ್ತಿರ ಬರುತ್ತಿದ್ದುದನ್ನು ನೋಡಿ, ಕಾರಿನಲ್ಲಿದ್ದವನ ಸನ್ನೆಯ ಮೇರೆಗೆ ಎಲ್ಲರೂ ಮನೆಯಿಂದ ಆಚೆಗೆ ಓಡಿ ಬಂದು ಕಾರಿನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.
ಚಿನ್ನಾಭರಣ ಇಟ್ಟಿದ್ದ ಮರದ ಬೀರುವಿನ ಬಾಗಿಲಿನ ಚಿಲಕ ಕಿತ್ತು ಮಂಚದ ಮೇಲೆ ಬಿಸಾಡಿದ್ದರು. ಆದರೆ, ಬೀರು ತೆಗೆದು ನೋಡಿದಾಗ ಯಾವುದೇ ಚಿನ್ನಾಭರಣ ಅಥವಾ ವಸ್ತುಗಳಾಗಲೂ ಕಳ್ಳತನ ಆಗಿರಲಿಲ್ಲ. ನಾಲ್ವರು ಮುಸುಕುಧಾರಿಗಳಾಗಿದ್ದು, ಒಬ್ಬನ ಕೈಯಲ್ಲಿ ಕಬ್ಬಿಣದ ಖಡ್ಗ ಇತ್ತು. ಮನೆಯಲ್ಲಿ ಹಣ, ಚಿನ್ನಾಭರಣ ದೋಚಲು ಬಂದವರು ನಾನು ಕಿರುಚಿಕೊಳ್ಳಲು ಆರಂಭಿಸಿದಾಗ ಕೊಲ್ಲಲು ಯತ್ನಿಸಿದರು ಎಂದು ಸುಶೀಲಮ್ಮ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಸೂರಜ್ ರೇವಣ್ಣ ಜಾಮೀನು ಅರ್ಜಿ ವಜಾಗೊಳಿಸಿದ 42ನೇ ಎಸಿಎಂಎಂ ನ್ಯಾಯಾಲಯ - Unnatural sexual assault Case