ಹಾವೇರಿ:ನಾಳೆ ನಾನು ಲೋಕಾಯುಕ್ತಕ್ಕೆ ಹೇಳಿಕೆ ಕೊಡಲು ಹೋಗುತ್ತಿದ್ದೇನೆ. ಸುಳ್ಳು ಕೇಸ್ನಲ್ಲಿ ಹೇಳಿಕೆ ಕೊಡುವ ಪರಿಸ್ಥಿತಿ ಬಂತಲ್ಲ ಅಂತ ಬೇಸರವಾಗುತ್ತದೆ. ರಾಜ್ಯಪಾಲರ ಮೇಲೆ ಒತ್ತಡ ತಂದು ನಮ್ಮ ಕುಟುಂಬಕ್ಕೆ ಕಿರುಕುಳ ಕೊಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಹಿರೇ ಬೆಂಡಿಗೇರಿಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು. ನಮ್ಮ ರಾಜ್ಯ ದಿವಾಳಿ ಆಗಿಲ್ಲ, ಜೆಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ನಂಬರ್ 1 ಇದೆ. ಗ್ಯಾರಂಟಿ ಜಾರಿಗೆ ತಂದ್ರೆ ರಾಜ್ಯ ದಿವಾಳಿ ಆಗುತ್ತೆ ಅಂತ ಮೋದಿ ಹೇಳಿದರು. ನಾವು ಯಾರ ಸಂಬಳ ನಿಲ್ಲಿಸಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯ ನಿಲ್ಲಿಸಿಲ್ಲ, ಜೆಡಿಪಿ ಬೆಳವಣಿಗೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಮೋದಿಗೆ ಇವೆಲ್ಲವೂ ಗೊತ್ತಿದೆ ಆದರೂ ಅವರು ಸುಳ್ಳು ಹೇಳ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬಿಜೆಪಿಯವರು ನಾಟಕ ಆಡುತ್ತಿದ್ದಾರೆ- ಸಿಎಂ;ವಕ್ಫ್ ನೋಟಿಸ್ ಕೊಟ್ಟವರು ಬಿಜೆಪಿಯವರು. ಉಪಚುನಾವಣೆ ಬಂದಿದೆ ಅಂತ ಬಿಜೆಪಿಯವರು ನಾಟಕ ಆಡುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲಿ ನಮ್ಮ ಗೆಲುವು ಖಚಿತ . ಈ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ಸೋಲು ನಿಶ್ಚಿತ. ಪೂರ್ವದಲ್ಲಿ ಸೂರ್ಯ ಉದಯಿಸುವದು ಎಷ್ಟು ಸತ್ಯವೋ ಪಠಾಣ್ ಗೆಲ್ಲುವುದು ಅಷ್ಟೇ ಸತ್ಯ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಯಾರು ಯಾರನ್ನೂ ರಾಜಕೀಯವಾಗಿ ಮುಗಿಸಲು ಆಗಲ್ಲ:ಇದಕ್ಕೂ ಮುನ್ನ ಚಂದಾಪುರ ಗ್ರಾಮದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದರು. ಆದರೆ, ಯಾರು ಯಾರನ್ನೂ ರಾಜಕೀಯವಾಗಿ ಮುಗಿಸಲು ಆಗಲ್ಲ. ಕ್ಷೇತ್ರದ ಜನರ ಕೈಯಲ್ಲಿ ಅದೆಲ್ಲಾ ಇದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬಸವರಾಜ ಬೊಮ್ಮಾಯಿ ಮಗ ಬಿಟ್ ಕಾಯಿನ್ ಕೇಸ್ನಲ್ಲಿ ಸಿಕ್ಕಾಕಿಕೊಂಡಿದ್ದರು ಎಂದು ಆರೋಪಿಸಿದ ಸಿದ್ದರಾಮಯ್ಯ, ಇಂಥವರಿಗೆ ಮತ ಹಾಕ್ತಿರಾ ಮತದಾರರನ್ನು ಪ್ರಶ್ನಿಸಿದರು. ಬಿಜೆಪಿ ಅಭ್ಯರ್ಥಿ ಭರತ್ ಸಾಮಾನ್ಯ ಕುಟುಂಬದಿಂದ ಬಂದವರಲ್ಲ. ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಸಾಮಾನ್ಯ ಕುಟುಂಬದಿಂದ ಬಂದವರು. ಭರತ್ ಬೊಮ್ಮಾಯಿಗೆ ಹಳ್ಳಿ ಜೀವನ ರೈತರ ಕೆಲಸ ಗೊತ್ತಿಲ್ಲ. ಪಠಾಣ್ ಹಳ್ಳಿಲಿ ಬೆಳೆದವರು. ಬಸವರಾಜ ಬೊಮ್ಮಾಯಿ ಈಗ ಎಂಪಿ. ಬೇರೆಯವರಿಗೆ ಟಿಕೆಟ್ ಕೊಡ್ತೀವಿ ಅಂತ ಹೇಳಿ ಅವರ ಮಗನನ್ನೇ ಅಭ್ಯರ್ಥಿ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.