ಮೈಸೂರು : ಮೈಸೂರು ಪ್ರವಾಸೋದ್ಯಮ ಕೇಂದ್ರ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಮಾನಯಾನ ಸಂಪರ್ಕ ಅಗತ್ಯ. ಈ ನಿಟ್ಟಿನಲ್ಲಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸುಮಾರು 18 ರಿಂದ 20 ವಿಮಾನ ಯಾನ ಸಂಸ್ಥೆಗಳು ಒಂದಾಗಿದ್ದು, ಇದೇ ಮಾರ್ಚ್ ತಿಂಗಳಿನಿಂದ ಕೇರಳದಿಂದ ಮೈಸೂರಿಗೆ ವಿಮಾನಯಾನ ಸಂಪರ್ಕ ಆರಂಭವಾಗಲಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಇಂದು ಏರ್ ಕೇರಳ ಹಾಗೂ ಮೈಸೂರು ಏರ್ಪೋರ್ಟ್ಸ್ ಅಥಾರಿಟಿ ಅಧಿಕಾರಿಗಳ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ಮೈಸೂರಿನಲ್ಲಿ ಪ್ರವಾಸೋದ್ಯಮ ಹಾಗೂ ವ್ಯಾಪಾರಕ್ಕೆ ಹೆಚ್ಚಿನ ಅವಕಾಶಗಳಿವೆ. ಆದರೆ, ಮೈಸೂರಿನಿಂದ ಬೇರೆ ಕಡೆ ಹಾಗೂ ಹಲವು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹಲವು ವಿಮಾನ ಯಾನಗಳು, ಹಲವಾರು ಕಾರಣಗಳಿಂದ ರದ್ದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ದೇಶದ ಇತರ ಕಡೆಗಳಿಂದ ವಿಮಾನಯಾನ ಸೇವೆ ಆರಂಭಿಸುವ ಬಗ್ಗೆ ಹಲವು ವಿಮಾನಯಾನ ಸಂಸ್ಥೆಗಳ ಜತೆ ಸಂಪರ್ಕ ಇದೆ. ಇದಕ್ಕಾಗಿ ಮೈಸೂರಿನ ಟ್ರಾವೆಲ್ಸ್ ಅಸೋಸಿಯೇಟ್ಸ್ , ಹೋಟೆಲ್ ಮಾಲೀಕರ ಸಂಘ ಹಾಗೂ ಇತರ ಸಂಸ್ಥೆಗಳ ಜತೆ ಮಾತುಕತೆ ನಡೆಸಿದ್ದು, ಪ್ರವಾಸೋದ್ಯಮದ ದೃಷ್ಟಿಯಿಂದ ಹೆಚ್ಚಿನ ವಿಮಾನಯಾನ ಸಂಪರ್ಕ ಸೇವೆ ಆರಂಭಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.