ಮೈಸೂರು:ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ(ಮುಡಾ) ಕಚೇರಿಗೆ ಇಂದು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ಬಿಜೆಪಿ ಸಂಸದ ಯದುವೀರ್ ಒಡೆಯರ್ ಹಾಗೂ ಶಾಸಕ ಶ್ರೀವತ್ಸ ಪ್ರತಿಕ್ರಿಯಿಸಿದರು.
ಮುಡಾ ಹಗರಣಗಳ ಕುರಿತು ಆರ್.ಟಿ.ಇ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ಸಂಬಂಧ ದೂರದಾರರಿಗೆ ಸಮನ್ಸ್ ನೀಡಿ ಅವರಿಂದ ಮಾಹಿತಿ ಹಾಗೂ 500 ಪುಟದ ಹಗರಣದ ದಾಖಲಾತಿಗಳನ್ನು ಪಡೆದಿದ್ದ ಇ.ಡಿ. ಅಧಿಕಾರಿಗಳು ಇಂದು ಭದ್ರತೆಯೊಂದಿಗೆ ವಾಹನಗಳಲ್ಲಿ ಆಗಮಿಸಿ ಮುಡಾ ಆಯುಕ್ತ ರಘುನಂದನ್ ಅವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ದಾಖಲಾತಿ ಇರುವ ಕೊಠಡಿಗೂ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದೀಗ ಮುಡಾ ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿದೆ. ಹೊರಭಾಗದಲ್ಲಿ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದ್ದಾರೆ. ದಿಢೀರ್ ಅಧಿಕಾರಿಗಳ ಭೇಟಿಯಿಂದ ದಿನನಿತ್ಯ ಕೆಲಸಕ್ಕೆ ಆಗಮಿಸಿದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಮುಡಾ ಕಚೇರಿಯಲ್ಲಿ ಇ.ಡಿ.ಅಧಿಕಾರಿಗಳ ಪರಿಶೀಲನೆಯ ಬಗ್ಗೆ ಸಂಸದ ಯದುವೀರ್ ಒಡೆಯರ್ ಮತ್ತು ಶಾಸಕ ಶ್ರೀವತ್ಸ ಮಾತನಾಡಿದರು. (ETV Bharat) ಸಂಸದ ಯದುವೀರ್ ಒಡೆಯರ್ ಹೇಳಿಕೆ: "ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಈ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಪ್ರಕರಣವನ್ನು ಇ.ಡಿ. ಗಂಭೀರವಾಗಿ ಪರಿಗಣಿಸಿದೆ. ಸೈಟ್ ವಾಪಸ್ ನೀಡಿ ಸಿಎಂ ಕುಟುಂಬ ತಪ್ಪನ್ನು ಒಪ್ಪಿಕೊಂಡಿದೆ. ಈ ಸಂದರ್ಭದಲ್ಲಿ ಸಿಎಂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ಈ ಬಗ್ಗೆ ಮೊದಲಿನಿಂದಲೂ ಒತ್ತಾಯಿಸುತ್ತಿದ್ದೇವೆ. ಇ.ಡಿ. ಪ್ರಾಮಾಣಿಕವಾಗಿ ತನಿಖೆ ಮಾಡುತ್ತದೆ ಎಂಬುದು ನಮ್ಮ ವಿಶ್ವಾಸ. ಮುಂದೆ ತನಿಖಾ ವರದಿ ಹೇಗಿರುತ್ತದೋ ನೋಡೋಣ" ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
ಶಾಸಕ ಶ್ರೀವತ್ಸ ಹೇಳಿಕೆ: "ಇ.ಡಿ.ಅಧಿಕಾರಿಗಳು ಮುಡಾದ ಮೇಲೆ ರೇಡ್ ಮಾಡಿರುವ ವಿಚಾರ ಸ್ವಾಗತಾರ್ಹ. ಆದರೆ ಮುಡಾದ ಫೈಲ್ಗಳು ಸಚಿವ ಬೈರತಿ ಸುರೇಶ್ ಹಾಗೂ ಸಿಎಂ ಕಚೇರಿಯಲ್ಲಿವೆ. ಈ ಬಗ್ಗೆ ಮುಡಾ ಅಧಿಕಾರಿಗಳು ಮೂಲ ಮುಡಾ ಕಡತಗಳು ಎಲ್ಲಿ ಹೋದವು ಎಂಬುದನ್ನು ಹುಡುಕಬೇಕು. ಈಗ ಸಿಎಂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು" ಎಂದರು.
ಇದನ್ನೂ ಓದಿ:ಮುಡಾ ಹಗರಣ; ಅಧ್ಯಕ್ಷ ಸ್ಥಾನಕ್ಕೆ ಕೆ. ಮರೀಗೌಡ ರಾಜೀನಾಮೆ