ಮೈಸೂರು/ನವದೆಹಲಿ:ಪಾರಂಪರಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ರಾಜಧಾನಿ ಎಂದೇ ವಿಶ್ವಮಟ್ಟದಲ್ಲಿ ಖ್ಯಾತಿ ಹೊಂದಿರುವ ಮೈಸೂರಿನಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳಿಗೆ ನೆರವು ಒದಗಿಸಬೇಕೆಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಈ ಸಂಬಂಧ ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಂಸದರು ಮನವಿ ಸಲ್ಲಿಸಿದರು. ಮೈಸೂರಿನ ಪಾರಂಪರಿಕತೆಗೆ ತಕ್ಕಂತೆ ಎಲ್ಐಸಿ ಸರ್ಕಲ್ ಬಳಿ "ಅರ್ಜುನ ಸ್ಮಾರಕ" ಮತ್ತು ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಯೋಗ ಮ್ಯೂಸಿಯಂ ಆಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕೆಂದು ಸಂಸದರು ಮನವಿ ಮಾಡಿದ್ದಾರೆ.
ಸಂಸದರ ಹೇಳಿಕೆ: ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಸಂಸದ ಯದುವೀರ್, ಮೈಸೂರಿನ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೆಲವು ಯೋಜನೆಗಳ ಕುರಿತು ಚರ್ಚಿಸಲಾಗಿದೆ. ಇದರಲ್ಲಿ ಪ್ರಮುಖವಾಗಿರುವುದು ನಮ್ಮ ದಸರಾ ಆನೆ ಅರ್ಜುನ ಸ್ಮರಣಾರ್ಥ ಸ್ಮಾರಕ ಹಾಗೂ ಯೋಗ ಮ್ಯೂಸಿಯಂ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಮೈಸೂರು ಮತ್ತು ದಸರಾ ಆನೆಗಳ ನಡುವೆ ಭಾವನಾತ್ಮಕ ಸಂಬಂಧವಿದೆ. ಎಲ್ಲರ ಮನ ಸೆಳೆದಿದ್ದ ಅರ್ಜುನ ಆನೆ ದುರಾದೃಷ್ಟವಶಾತ್ ನಮ್ಮನ್ನು ಅಗಲಿದೆ. ಹಲವು ವರ್ಷಗಳ ಕಾಲ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಗಾಂಭೀರ್ಯದಿಂದ ಸಾಗಿದ ಈ ಗಜದ ನೆನಪಿನಲ್ಲಿ ಸ್ಮಾರಕ ನಿರ್ಮಾಣ ಮಾಡುವುದು ಸೂಕ್ತ ಎನಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಸಚಿವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಬೇಗ ಇದು ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ ಎಂದು ಸಂಸದರು ವಿವರಿಸಿದರು.
ಅರ್ಜುನ ಸ್ಮರಣಾರ್ಥ ಸ್ಮಾರಕ:ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ "ಅರ್ಜುನ" ಆನೆ ಹಲವಾರು ವರ್ಷಗಳ ಕಾಲ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದೆ. ಆದರೆ ಕಾಡಾನೆಯೊಂದರ ದಾಳಿಯಿಂದಾಗಿ ನಾವು ಅರ್ಜುನ ಆನೆಯನ್ನು ಕಳೆದುಕೊಂಡಿದ್ದೇವೆ. ಈಗ ಈ "ಅರ್ಜುನ" ಆನೆಯ ಸ್ಮರಣಾರ್ಥ, ಗೌರವ ಸೂಚಕವಾಗಿ ಎಲ್ಐಸಿ ಸರ್ಕಾಲ್ ಅನ್ನು "ಅರ್ಜುನ" ಆನೆ ಹೆಸರಿಡಬೇಕು. ಇದನ್ನು ಐತಿಹಾಸಿಕ ಹಾಗೂ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಸಂಸದರು ಹೇಳಿದರು.