ಬೆಂಗಳೂರು: ಬೆಳಗಾವಿಯ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮನಮೋಹನ್ ಸಿಂಗ್ ಅವರ ಫೋಟೋ ಹಾಕಿದ್ರಾ? ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಸಂದರ್ಭದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡ್ತಿದೆ. ಜನರಿಗೆ ತಪ್ಪು ಸಂದೇಶ ನೀಡಲು ಪ್ರಯತ್ನಿಸುತ್ತಿದೆ. ಈಗಾಗಲೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಮಾಧಿಗೆ, ಸ್ಮಾರಕಕ್ಕೆ ಜಾಗ ನೀಡ್ತೀವಿ ಎಂದು ಪ್ರಧಾನಿ ಹೇಳಿದ್ದಾರೆ. ಮನಮೋಹನ್ ಸಿಂಗ್ಗೆ ಅವಮಾನ ಮಾಡಿದ್ರು ಅಂತಾ ಕಾಂಗ್ರೆಸ್ನವರು ಹೇಳ್ತಿದ್ದಾರೆ. ಅವರು ಮೃತಪಟ್ಟ ಬಳಿಕ ಕೇವಲ ರಾಜಕಾರಣಕ್ಕಾಗಿ ನೆನಪು ಮಾಡಿಕೊಳ್ತಿದ್ದಾರೆ ಎಂದು ಕಿಡಿಕಾರಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇದಕ್ಕೆ ಉತ್ತರ ಕೊಡಬೇಕು. ಕಾಂಗ್ರೆಸ್ನಲ್ಲಿ ಮೂರು ಜನ ಪದಾಧಿಕಾರಿಗಳಿದ್ದಾರೆ. ಖರ್ಗೆ, ವೇಣುಗೋಪಾಲ್, ಸುರ್ಜೆವಾಲಾ ಪಧಾದಿಕಾರಿಗಳು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸರ್ವಾಧಿಕಾರಿಗಳು. ಮಲ್ಲಿಕಾರ್ಜುನ, ವೇಣುಗೋಪಾಲ್, ಸುರ್ಜೆವಾಲಾ ಹೇಳಿದ ಹಾಗೆ ನಡೆಯೋಲ್ಲ. ಇವರು ಉತ್ಸವ ಮೂರ್ತಿಗಳು. ಸೂಕ್ತವಾದ ಜಾಗವನ್ನ ಸ್ಮಾರಕಕ್ಕೆ ನೀಡ್ತೀವಿ ಅಂತ ಈಗಾಗಲೇ ಪ್ರಧಾನಿ ಹೇಳಿದ್ದಾರೆ. ಟ್ರಸ್ಟ್ ಮಾಡಬೇಕು. ಈ ಮೂಲಕ ಎಲ್ಲಿ ಕಟ್ಟಬೇಕೆಂಬ ನಿಯಾಮವಳಿ ಇದೆ ಎಂದು ಕಾರಜೋಳ ಹೇಳಿದರು.
ಅಂಬೇಡ್ಕರ್ರಿಗೆ ಅಪಮಾನ ಆಗಿದೆ ಅಂತ ದೇಶದ ಉದ್ದಗಲಕ್ಕೆ ಬೊಬ್ಬೆ ಹಾಕಿ ಕಾಂಗ್ರೆಸ್ನವರು ಆರೋಪ ಮಾಡ್ತಿದ್ದಾರೆ. ಅಂಬೇಡ್ಕರ್ಗೆ ಹಣಕಾಸು ಇಲಾಖೆ ಕೊಡದೆ, ಕಾನೂನು ಇಲಾಖೆ ಕೊಟ್ರು. ಹೀಗೆ ಅವಮಾನ ಮಾಡಿದ್ದರಿಂದ ಅವರು ರಾಜೀನಾಮೆ ಕೊಟ್ಟು ಬಂದ್ರು. 1952ರ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನ ಸೋಲಿಸಿದಾಗ, ನೆಹರು ಸಂಭ್ರಮಾಚರಣೆ ಮಾಡಿದ್ರು. ಇದು ದಲಿತರಿಗೆ ಮಾಡಿದ ಅವಮಾನವಲ್ಲವೆ. ಸುಳ್ಳು ಹೇಳಿ ಅಂಬೇಡ್ಕರ್ ಅವರಿಗೆ ಜೀವತಾವಧಿಯಲ್ಲಿ ಭಾರತ ರತ್ನ ಕೊಡಲಿಲ್ಲ. ನೆಹರು ಅವರೇ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ್ರು ಎಂದು ಸಂಸದ ಕಾರಜೋಳ ತಿರುಗೇಟು ನೀಡಿದರು.
ಅಂಬೇಡ್ಕರ್ ಅವರಿಗೆ ರಾಜ್ಘಾಟ್ನಲ್ಲಿ ಸಮಾಧಿಗೆ ಜಾಗ ಕೊಡಲಿಲ್ಲ. 5,000 ರೂ. ಬಾಡಿಗೆ ಕೊಟ್ಟು ಮುಂಬೈಗೆ ವಿಮಾನದ ಮೂಲಕ ಮೃತದೇಹ ತಂದು ಅವರ ಸಮಾಧಿ ಮಾಡಿದ್ದನ್ನು ಮರೆಯೋಕೆ ಆಗುವುದಿಲ್ಲ. ಕಾಂಗ್ರೆಸ್ ಉರಿಯುವ ಮನೆ, ಕಾಂಗ್ರೆಸ್ಗೆ ಹೋಗಬೇಡಿ ಎಂದು ಅಂಬೇಡ್ಕರ್ ಸಂದೇಶ ಕೊಟ್ಟಿದ್ರು. ವಿ. ಪಿ ಸಿಂಗ್ ಉಚ್ಚಾಟನೆ ಮಾಡಿದ್ರು, ದೇವರಾಜ್ ಅರಸು ಅವರನ್ನ ಕಾಂಗ್ರೆಸ್ನಿಂದ ಉಚ್ಚಾಟನೆ ಮಾಡಿದ್ರು. ದೇವೇಗೌಡರನ್ನ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಉತ್ತರ ಕೊಡಬೇಕು. ಸಂವಿಧಾನವನ್ನ ಧರ್ಮ ಗ್ರಂಥ ಅಂತ ಹೇಳಿದ್ದು ಪ್ರಧಾನಿ ಮೋದಿಯವರು. ಅಂಬೇಡ್ಕರ್ ಅವರಿಗೆ ಅಮಿತ್ ಶಾ ಅವಮಾನ ಮಾಡಿಲ್ಲ. ಕಾಂಗ್ರೆಸ್ನವರ ಮೋಸ ಮಾಡುವ ವಿಚಾರಕ್ಕೆ ದಲಿತರು ಕಿವಿಗೊಡಬಾರದು. ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ ಎಂದು ಕಾರಜೋಳ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು : ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿ, ನಾನು ಸಿಎಂಗೆ ನೆನಪು ಮಾಡಿಕೊಡ್ತೇನೆ. ಬೆಳಗಾವಿಯಲ್ಲಿ ಸಂತೋಷ್ ಪಾಟೀಲ್ ಅನ್ನೋ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಾಗ ವಿನಾಕಾರಣ ಈಶ್ವರಪ್ಪ ರಾಜೀನಾಮೆ ಪಡೆಯುವಂತೆ ಮಾಡಿದ್ರಿ. ನಿಮಗೆ ಈಶ್ವರಪ್ಪ ಪ್ರಕರಣ ಮಾದರಿಯಾಗಬೇಕು. ನಿಷ್ಪಕ್ಷಪಾತ ತನಿಖೆ ಆಗಲು ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲಿ. ರಾಜೀನಾಮೆ ಕೊಡುವ ಮೂಲಕ ಪ್ರಿಯಾಂಕ್ ಖರ್ಗೆ ಒಬ್ಬ ಮಾದರಿ ರಾಜಕಾರಣಿ ಆಗಲಿ. ನಮ್ಮ ಪಕ್ಷದ ನಿಯೋಗ ಇಂದು ಸಚಿನ್ ಅವರ ಮನೆಗೆ ಭೇಟಿ ಕೊಡ್ತಿದೆ. ನಿಷ್ಪಕ್ಷಪಾತ ತನಿಖೆಗೆ ಪ್ರಿಯಾಂಕ್ ಖರ್ಗೆ ಅವಕಾಶ ಮಾಡಿಕೊಡಬೇಕು. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರೂ ಸಹ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ :ರಾಜ್ಯ ಸರ್ಕಾರ ರೈತರ ಜೊತೆ ಆಡುತ್ತಿರುವ ಬುಗುರಿ ಆಟ ಬಿಡಬೇಕು: ಗೋವಿಂದ ಕಾರಜೋಳ - GOVIND KARJOL