ಶಿವಮೊಗ್ಗ:ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರದ ತಿಕ್ಕಾಟ ಪ್ರಾರಂಭವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದ ವಿನೋಬನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಅಧಿಕಾರದ ತಿಕ್ಕಾಟವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಇವರು ಸಿಎಂ ಹಾಗೂ ಡಿಸಿಎಂ ಖುರ್ಚಿಯ ಚರ್ಚೆಯನ್ನು ಗಮನಿಸುತ್ತಿದ್ದಾರೆ ಎಂದರು.
ಬೆಲೆ ಏರಿಕೆ ವಿಚಾರ:ಒಂದು ವರ್ಷ ತುಂಬಿದ ಮೇಲೆ ಮತದಾರರ ವಿರುದ್ಧ ಸೇಡು ತೀರಿಸಿಕೊಳ್ಳುವ ಕೆಲಸ ಸರ್ಕಾರದಿಂದ ಆಗುತ್ತಿದೆ. ಹಾಲಿನ ದರ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗಿದೆ. ಜನರ ಜೇಬಿಗೆ ಕೈ ಹಾಕಿ ಹಣ ಕಿತ್ತುಕೊಳ್ಳುವ ಕೆಲಸ ಆಗಿದೆ ಎಂದು ಸಂಸದ ವಾಗ್ದಾಳಿ ನಡೆಸಿದರು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕು: ಹಾವೇರಿಯಲ್ಲಿ ನಡೆದ ಭೀಕರ ಅಪಘಾತ ದುಃಖ ತಂದಿದೆ. ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಸದಸ್ಯರು ಸಾವನಪ್ಪಿದ್ದಾರೆ. ಸರ್ಕಾರ ಈಗಾಗಲೇ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದೆ. ಇನ್ನು ಹೆಚ್ಚಿನ ಪರಿಹಾರ ನೀಡಬೇಕು. ಕನಿಷ್ಠ ಒಬ್ಬರಿಗೆ 5 ಲಕ್ಷ ಪರಿಹಾರ ನೀಡಬೇಕು. ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಲು ಪಕ್ಷದಿಂದಲೂ ಪ್ರಯತ್ನ ಮಾಡುತ್ತೇವೆ ಎಂದರು.