ಶಿವಮೊಗ್ಗ: ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ನಡುವೆ ಹೋರಾಟ ನಡೆಯುತ್ತಿದೆ. ಪಕ್ಷೇತರವಾಗಿ ನಮ್ಮ ಕೆಲ ಸ್ನೇಹಿತರು ನಿಂತಿರುವುದರಿಂದ ನಮ್ಮ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ವಿಶ್ವಾಸ ಬಂದಿದೆ. ಹಿಂದೂ ಮತದಾರರ ಕ್ರೋಢೀಕರಣ ಇದರ ಮುಖಾಂತರ ಆಗುತ್ತಿದೆ. ಬಿಜೆಪಿ ಅಭ್ಯರ್ಥಿಗೆ ಮತಗಳ ಕೊರತೆ ಆಗಬಾರದು ಎಂದು ಹಿಂದೂ ಬಾಂಧವರು ದೊಡ್ಡ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದಾರೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರ ಮನಸ್ಸು ತುಂಬಾ ದೊಡ್ಡದು. ದೇಶದ ಹಿತದೃಷ್ಟಿಯಿಂದ, ಜನರ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಹಾಗೂ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದ ಅವರು, ರಾಘವೇಂದ್ರ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂಬ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಒಂದೂಂದು ಹೆಜ್ಜೆ ಇಟ್ಟರೂ ರಾಘಣ್ಣ ಕಟ್ಟಿಸಿದ ಕಟ್ಟೆಗಳು ಕಾಣುತ್ತವೆ. ಅದರ ಪಟ್ಟಿಯನ್ನು ಬೇಕಾದರೆ ಅವರಿಗೆ ಕೊಡುತ್ತೇನೆ. ನೀರಾವರಿ, ರಸ್ತೆ - ಚರಂಡಿ, ವಿದ್ಯುತ್ ದೀಪ, ಸಮುದಾಯ ಭವನ, ಬಿಎಸ್ಎನ್ಎಲ್ ಟವರ್ಗಳಿರಬಹುದು. ಅವರಿಗೆ ಎಲ್ಲೆಲ್ಲಿ ಕಟ್ಟೆ ನೋಡಬೇಕು ಅಂತ ಅನಿಸುತ್ತೆ ಹೇಳಲಿ, ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಪಟ್ಟಿ ಕೊಡುವ ಕೆಲಸ ಮಾಡುತ್ತೇನೆ ಎಂದು ತಿರುಗೇಟು ನೀಡಿದರು.