ಬೆಂಗಳೂರು:ಇಬ್ಬರು ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿರುವ ಪ್ರಕರಣ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶುಭಂ ಸಾಹು (7) ಹಾಗೂ ಶಿಯಾ ಸಾಹು (3) ಮೃತ ಮಕ್ಕಳು ಎಂದು ಗುರುತಿಸಲಾಗಿದೆ.
ತಾಯಿಯು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ತಾಯಿ ಮಮತಾ ಸಾಹುಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪತಿ ಹಾಗೂ ಪತ್ನಿಯು ಆರೋಪ, ಪ್ರತ್ಯಾರೋಪ ಕೇಳಿ ಬಂದಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾರ್ಖಂಡ್ ಮೂಲದ ಮಮತಾ ದಂಪತಿ ಕಳೆದ 6 ತಿಂಗಳಿಂದ ಸುಬ್ರಮಣ್ಯಪುರದಲ್ಲಿ ವಾಸವಿದ್ದರು. ಮಮತಾ ಪತಿ ಆಟೋ ಡ್ರೈವರ್ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಇತ್ತೀಚಿಗೆ ದಂಪತಿ ನಡುವೆ ಗಲಾಟೆಯಾಗಿದ್ದು, ಮಮತಾ ಸಾಹು ಊರಿಗೆ ತೆರಳಲು ಸಿದ್ದಳಾಗಿದ್ದಳು. ಆಟೋ ಚಾಲಕನಾಗಿದ್ದ ಪತಿ ನಿನ್ನೆ ಕೆಲಸಕ್ಕೆ ತೆರಳಿದ್ದಾಗ ಮಮತಾ ಮಕ್ಕಳಿಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಪತಿಗೆ ಸೆಲ್ಫಿ ಫೋಟೋ ಕಳಿಸಿದ್ದ ಮಮತಾ, ಚಾಕು ತೆಗೆದುಕೊಂಡು ತಾನೂ ಸಹ ಕತ್ತು ಕೊಯ್ದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ. ಫೋಟೋ ನೋಡಿದ್ದ ಪತಿ ಮನೆಗೆ ಬರುವಷ್ಟರಲ್ಲಿ ಮಕ್ಕಳಿಬ್ಬರೂ ಮೃತಪಟ್ಟಿದ್ದರು. ನಂತರ ಆತ್ಮಹತ್ಯೆಗೆ ಯತ್ನಿಸಿದ್ದ ಮಮತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ:''ಗುರುವಾರ ರಾತ್ರಿ 7 ರಿಂದ 9:45ರ ನಡುವೆ ಘಟನೆ ನಡೆದಿದೆ. ತಾಯಿಯಿಂದಲೇ ಕೃತ್ಯ ನಡೆದಿರುವ ಶಂಕೆಯಿದೆ. ಆದರೆ ಪತಿಯಿಂದಲೇ ಹತ್ಯೆ ನಡೆದಿದೆ ಎಂದು ಮಮತಾ ಸಾಹು ಆರೋಪಿಸಿದ್ದಾಳೆ. ಆದರೆ ಘಟನೆ ನಡೆದ ಸಂದರ್ಭದಲ್ಲಿ ಆಕೆಯ ಪತಿ ಇರಲಿಲ್ಲ ಎನ್ನಲಾಗಿದೆ. ಮಕ್ಕಳಿಬ್ಬರ ತಂದೆ ನೀಡಿರುವ ದೂರಿನನ್ವಯ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದಂಪತಿಯ ಆರೋಪ ಪ್ರತ್ಯಾರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ'' ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್.ಬಿ.ಜಗಲಾಸರ್ ತಿಳಿಸಿದ್ದಾರೆ.
ಇದನ್ನೂ ಓದಿ:ಹನಿಟ್ರ್ಯಾಪ್ ಮಾಡಿ 2 ಕೋಟಿಗೂ ಅಧಿಕ ಹಣ ವಸೂಲಿ ಆರೋಪ: ಮೂವರು ಆರೋಪಿಗಳ ಬಂಧನ