ಬೆಂಗಳೂರು: ಮುಂಗಾರು ಮಳೆ ರಾಜ್ಯದಲ್ಲಿ ಮತ್ತೆ ಚುರುಕು ಪಡೆದಿದ್ದು, ಸಾಕಷ್ಟು ಜಿಲ್ಲೆಗಳಲ್ಲಿ ಅತಿವೃಷ್ಟಿಗೆ ಕಾರಣವಾಗಿದೆ. ಹವಾಮಾನ ಇಲಾಖೆ ಮುಂದಿನ 5 ದಿನಗಳ ಕಾಲ ಸಾಕಷ್ಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ 24 ಗಂಟೆಗಳ ಕಾಲ ಹಾಗೂ ಆಗಸ್ಟ್ 19, 20ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಒಳನಾಡಿನ ಬಾಗಲಕೋಟೆ, ಹಾವೇರಿ ಜಿಲ್ಲೆಗಳಿಗೆ ಇಂದು, ಬೆಳಗಾವಿ ಜಿಲ್ಲೆಗೆ ಆಗಸ್ಟ್ 20ಕ್ಕೆ, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಇಂದಿನಿಂದ ಎರಡು ದಿನ ಹಾಗೂ ಆಗಸ್ಟ್ 20ಕ್ಕೆ, ವಿಜಯಪುರ ಜಿಲ್ಲೆಗೆ ಇಂದು ಮತ್ತು ನಾಳೆ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗೆ ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ.
ಐದು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ಬಾಗಲಕೋಟೆ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಒಳನಾಡಿನ ಉಳಿದ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ:ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿಗ್ರಿ ಮತ್ತು 23 ಡಿಗ್ರಿ ದಾಖಲಾಗಲಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ಮಾತನಾಡಿ, "ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ದಕ್ಷಿಣ ಕೇರಳ ಕರಾವಳಿಯ ಮೇಲಿನ ಚಂಡಮಾರುತದ ಪರಿಚಲನೆ ಈಗ ದಕ್ಷಿಣ ಒಳನಾಡು ಮತ್ತು ನೆರೆಹೊರೆಯಲ್ಲಿದೆ. ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ಎತ್ತರದಲ್ಲಿದ್ದು, ನೈಋತ್ಯಕ್ಕೆ ವಾಲುತ್ತದೆ. ಇನ್ನೊಂದೆಡೆ, ಕೊಂಕಣದಿಂದ ಆಗ್ನೇಯ ಅರೇಬಿಯನ್ ಸಮುದ್ರದವರೆಗಿನ ಟ್ರಫ್ ಈಗ ಉತ್ತರ ಒಳನಾಡಿನಿಂದ ಕೊಮೊರಿನ್ ಪ್ರದೇಶದಲಿದ್ದು, ಅದು ದಕ್ಷಿಣ ಒಳನಾಡು ಮತ್ತು ನೆರೆಹೊರೆಯ ಮೂಲಕ ಸಾಗುತ್ತದೆ ಮತ್ತು ಸರಾಸರಿ ಸಮುದ್ರಮಟ್ಟದಿಂದ 1.5 ಕಿಮೀ ಎತ್ತರದಲ್ಲಿದೆ" ಎಂದರು.
"ಈ ಹಿನ್ನೆಲೆಯಲ್ಲಿ ಮುಂಗಾರು ಮಳೆ ಒಳನಾಡಿನಲ್ಲಿ ಸಾಮಾನ್ಯವಾಗಿದೆ, ಕರಾವಳಿಯಲ್ಲಿ ದುರ್ಬಲವಾದಂತೆ ಕಂಡು ಬರುತ್ತಿದೆ. ನಿನ್ನೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಅತಿ ಹೆಚ್ಚು ಮಳೆ 7 ಸೆ.ಮೀ ಚಿತ್ರದುರ್ಗ ಜಿಲ್ಲೆಯ ಬಿ ದುರ್ಗದಲ್ಲಿ ಸುರಿದಿದೆ" ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ:ಗಂಗಾವತಿಯಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು, ಅಪಾರ ಪ್ರಮಾಣದ ಭತ್ತ ನಾಶ - Gangavathi Rain