ಕರ್ನಾಟಕ

karnataka

ETV Bharat / state

ಮುಂಗಾರು ಮಳೆ: ಹಸಿರು ಹೊದ್ದು ನಿಂತ ಐತಿಹಾಸಿಕ ದೊಡ್ಡಹುಣಸೆ ಮರಗಳು - MONSOON RAIN - MONSOON RAIN

ಮುಂಗಾರು ಮಳೆ ಹಿನ್ನೆಲೆ ಹಾವೇರಿ ಜಿಲ್ಲೆಯ ಸವಣೂರಿನ ಐತಿಹಾಸಿಕ ದೊಡ್ಡಹುಣಸೆ ಮರಗಳು ಹಸಿರು ಹೊದ್ದು ನಿಂತಿವೆ.

Historic Big Tamarind trees  Haveri  Big Tamarind trees
ಹಸಿರು ಹೊದ್ದು ನಿಂತ ಐತಿಹಾಸಿಕ ದೊಡ್ಡಹುಣಸೆ ಮರಗಳು (ETV Bharat)

By ETV Bharat Karnataka Team

Published : Jun 15, 2024, 3:14 PM IST

ಹಸಿರು ಹೊದ್ದು ನಿಂತಿರುವ ಹಾವೇರಿ ಜಿಲ್ಲೆಯ ಸವಣೂರಿನ ಐತಿಹಾಸಿಕ ದೊಡ್ಡಹುಣಸೆ ಮರಗಳು (ETV Bharat)

ಹಾವೇರಿ:ಹಲವು ವೈಶಿಷ್ಟ್ಯಗಳಿಂದ ಕೂಡಿರುವ ಹಾವೇರಿ ಜಿಲ್ಲೆಯ ಸವಣೂರಿನ ಆನೆಹುಣಸೆ ಮರಗಳು ಹಲವು ವಿಶೇಷತೆಗಳಿಂದ ಕೂಡಿವೆ. ಸ್ಥಳೀಯವಾಗಿ ದೊಡ್ಡಹುಣಸೆ ಮರಗಳು ಎಂದು ಕರೆಸಿಕೊಳ್ಳುವ ಈ ಬೃಹತ್ ಮರಗಳಿಗೆ ಎರಡು ಸಾವಿರ ವರ್ಷಗಳಷ್ಟು ಹಳೆಯದಾಗಿವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಹಸಿರಿನಿಂದ ನಳನಳಿಸುತ್ತಿರುವ ದೊಡ್ಡಹುಣಸೆ ಮರಗಳು:ಈ ದೊಡ್ಡಹುಣಸೆ ಮರಗಳನ್ನು ಗೋರಕನಾಥ್‌ ಅವರು ಎರಡು ಸಾವಿರ ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಿಂದ ತಂದು ಸವಣೂರಲ್ಲಿ ನೆಟ್ಟಿದ್ದರಂತೆ. ಅಷ್ಟೇ ಅಲ್ಲದೇ ಈ ವೃಕ್ಷಗಳ ಕೆಳಗೆ ಕುಳಿತು ತಪಸ್ಸು ಮಾಡಿ ಇಷ್ಟಾರ್ಥಗಳನ್ನು ಸಿದ್ಧಿಸಿಗೊಂಡಿದ್ದರು. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಮರಗಳನ್ನ ದೈವಿಶಕ್ತಿಯಾಗಿ ಸಾವಿರಾರು ಭಕ್ತರು ನೋಡುತ್ತಾರೆ. ಮಠದ ಆವರಣದಲ್ಲಿ ಮೂರು ಮರಗಳಿದ್ದು, ಮುಂಗಾರು ಮಳೆಗೆ ಈ ಮರಗಳು ಚಿಗುರೊಡೆದು ಹಸಿರಿನಿಂದ ನಳನಳಿಸುತ್ತಿವೆ. ಅದರಲ್ಲೂ ಒಂದು ಮತ್ತು ಎರಡನೇ ಮರಗಳು ಹಸಿರು ಹೊದ್ದು ನಿಂತಿದ್ದು, ಎಲ್ಲರನ್ನೂ ಆಕರ್ಷಿಸುತ್ತಿವೆ.

ಉರುಳಿಬಿದ್ದ ಮೂರನೇ ದೊಡ್ಡ ಹುಣಸೆಮರವೂ ಹಸಿರುಮಯ:ಆಶ್ಚರ್ಯ ಎಂದರೆ ಕಳೆದ ವರ್ಷ ಮುಂಗಾರಿನಲ್ಲಿ ಬಿದ್ದಿದ್ದ ಮೂರನೇ ದೊಡ್ಡ ಹುಣಸೆಮರ ಸಹ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ಕಳೆದ ವರ್ಷ ಫಂಗಸ್ ಮತ್ತು ಬ್ಯಾಕ್ಟೀರಿಯಾದಿಂದ ಮೂರನೇ ದೊಡ್ಡಹುಣಸೆಮರ ಧರೆಗುರುಳಿತ್ತು. ಮರ ಧರೆಗುರುಳುತ್ತಿದ್ದಂತೆ ಮಠದ ಚನ್ನಬಸವ ಶ್ರೀಗಳು ತೀವ್ರ ಆತಂಕಗೊಂಡಿದ್ದರು. ಈ ಮರವನ್ನು ಮತ್ತೆ ನೆಡಲು ಸಾಕಷ್ಟು ಕಷ್ಟಪಟ್ಟಿದ್ದರು. ನಂತರ, ಈ ಇದನ್ನು ಮರುನೆಡುವಲ್ಲಿ ಯಶಸ್ವಿಯಾಗಿದ್ದರು. ಸಹಸ್ರಾರು ಭಕ್ತರು, ಕೃಷಿ ಅಧಿಕಾರಿಗಳು, ಅರಣ್ಯಾಧಿಕಾರಿಗಳು ಪರಿಸರ ವಾದಿಗಳ ವೈಜ್ಞಾನಿಕ ಕ್ರಮದಿಂದ ದೊಡ್ಡಹುಣಸೆ ಮರವನ್ನು ಮತ್ತೆ ನೆಡಲಾಗಿತ್ತು. ಅಲ್ಲದೇ ಅದಕ್ಕೆ ಹಲವು ರಸಾಯನಿಕಗಳನ್ನು ಸಿಂಪಡಿಸಿ ಫಂಗಸ್ ಬ್ಯಾಕ್ಟೀರಿಯಾ ನಾಶಪಡಿಸಿ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಮೂರನೇ ದೊಡ್ಡಹುಣಸೆ ಮರವನ್ನು ಪುನಃ ನೆಡಲಾಗಿತ್ತು.

ಮರ ನೆಟ್ಟು ಮೂರು ತಿಂಗಳ ಬಳಿಕ ಶ್ರೀಗಳು ಮರ ಜೀವಂತವಾಗಿರುವುದನ್ನು ಗುರುತಿಸಿದ್ದರು. ಇದೀಗ ಉತ್ತಮ ಮುಂಗಾರು ಮಳೆ ಹಿನ್ನೆಲೆ, ಸವಣೂರಿನ ಈ ದೈವಿಶಕ್ತಿಯ ಆನೆಹುಣಸೆ ಮರಗಳಿಗೆ ಹೊಸ ಕಳೆ ಬಂದಿದೆ. ಅದರಲ್ಲೂ
ಕಳೆದ ವರ್ಷ ಮರುನೆಡಲ್ಪಟ್ಟ ಆನೆಹುಣಸೆಮರ ಮತ್ತಷ್ಟು ಚಿಗುರೊಡೆದಿದ್ದು, ಮರದಲ್ಲಿರುವ ಟೊಂಗೆಯಲ್ಲಿ ಇದೀಗ ಹಿಂದಿನಂತೆ ಬಾವಲಿಗಳು ವಾಸಿಸಲಾರಂಭಿಸಿವೆ. ಅವುಗಳ ಆವಾಸಸ್ಥಾನದಲ್ಲಿ ಬಾವಲಿಗಳು ವಾಸಿಸುತ್ತಿರುವುದನ್ನ ಕಂಡು ಭಕ್ತರು ಸಹ ಆಶ್ಚರ್ಯಗೊಂಡಿದ್ದಾರೆ. ಈ ದೊಡ್ಡಹುಣಸೆಮರಗಳು ಸಾಕಷ್ಟು ವೈಜ್ಞಾನಿಕ ಕೌತುಕಗಳನ್ನು
ಹೊಂದಿವೆ. ಈ ಮರದ ಕೆಳಗೆ ಅಡುಗೆ ಪದಾರ್ಥವನ್ನು ಇಟ್ಟರೆ ಒಂದು ತಿಂಗಳು ಕಾಲ ಅನ್ನ ಹಳಸುವುದಿಲ್ಲ. ಯಾವುದೇ ಹಾನಿಗೊಳಗಾಗದೆ ಹಾಗೆ ಇರುತ್ತೆ ಎನ್ನುತ್ತಾರೆ ಸ್ಥಳೀಯರು.

ಇನ್ನು, ದೊಡ್ಡಹುಣಸೆಮರದ ಕಾಯಿಗಳನ್ನು ನೂರು ವರ್ಷಗಳ ಕಾಲ ಇಟ್ಟರು ಕೆಡುವುದಿಲ್ಲ. ಈ ಕಾಯಿಯನ್ನು ನೂರು ವರ್ಷದ ನಂತರ ಒಡೆದು ಸೇವಿಸಬಹುದು. ಈ ಮರದ ತೊಗಟೆ, ಟೊಂಗೆ, ಹೂವು, ಕಾಯಿಗಳಲ್ಲಿ ಔಷಧಿಯ ಗುಣಗಳಿದ್ದು, ಹಲವು ರೋಗಗಳಿಗೆ ರಾಮಬಾಣ ಎಂದು ಭಕ್ತರು ಹೇಳುತ್ತಾರೆ.

ಮಠದ ಶ್ರೀಗಳು ಮಾತು:''ಈ ಔಷಧಿಯ ಗುಣವಿರುವ ಅಪರೂಪದ ಈ ಆನೆಹುಣಸೆಮರಗಳನ್ನು ನೋಡಲು ದೂರ ದೂರದಿಂದ ಪ್ರವಾಸಿಗರು ಆಗಮಿಸುತ್ತಾರೆ. ಈ ವಿಶಿಷ್ಟ ದೊಡ್ಡ ಕಾಂಡಗಳಿರುವ ಮರಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಅದರ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಈ ಮರಗಳಿರುವ ಪ್ರದೇಶದಲ್ಲಿ ಮಠದ ಹುಟ್ಟಿಕೊಂಡಿದ್ದು, ಈ ಮಠಕ್ಕೆ ದೊಡ್ಡಹುಣಸೆಮಠ ಎಂದೇ ಕರೆಯಲಾಗುತ್ತದೆ. ಈ ಮಠದ ಪೀಠಾಧಿಪತಿಗಳಾಗಿರುವ ಚೆನ್ನಬಸವ ಶ್ರೀಗಳು ಮೂರು ಮರಗಳ ಕಾಳಜಿ ಮತ್ತು ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಅದರಲ್ಲೂ ಕಳೆದ ವರ್ಷ ಮರ ಉರುಳಿದ್ದರಿಂದ ಉಳಿದ ಎರಡು ಮರಗಳಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಈ ಮರಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕು. ಈ ಮರಗಳನ್ನು ಸಂರಕ್ಷಣೆ ಮಾಡಬೇಕು ಎನ್ನುತ್ತಾರೆ ಮಠದ ಶ್ರೀಗಳು.

ಇದನ್ನೂ ಓದಿ:ವಿದ್ಯಾಭ್ಯಾಸದ ಮಹತ್ವ ಹೇಳಿ ಗ್ರಾಮೀಣ ಮಕ್ಕಳನ್ನು ಸಿದ್ದಗಂಗಾ ಶಾಲೆಗೆ ದಾಖಲಿಸುತ್ತಿರುವ ಹಳೆ ವಿದ್ಯಾರ್ಥಿಗಳು - Siddaganga Math School Admission

ABOUT THE AUTHOR

...view details