ಶಿವಮೊಗ್ಗ:ಮಂಗನ ಕಾಯಿಲೆ(ಕೆಎಫ್ಡಿ) ಕಂಡುಬರುವ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರದಂಥ ಪ್ರಕರಣಗಳು ಕಂಡುಬಂದ ತಕ್ಷಣ ಕೆಎಫ್ಡಿ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗನ ಕಾಯಿಲೆ ಕುರಿತು ಶನಿವಾರ ಇಲ್ಲಿನ ಡಿಹೆಚ್ಒ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ನಂತರ ಮಾತನಾಡಿದ ಆಯುಕ್ತರು, "ವಾಡಿಕೆಯಂತೆ ಈ ವರ್ಷವೂ ಮೂರು ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ. ಜ.1ರಿಂದ ಫೆ.2ರವರೆಗೆ ರಾಜ್ಯದಲ್ಲಿ ಒಟ್ಟು 2,288 ಕೆಎಫ್ಡಿ ಪರೀಕ್ಷೆ ನಡೆಸಲಾಗಿದೆ. ಶಿವಮೊಗ್ಗದಲ್ಲಿ 12, ಉತ್ತರ ಕನ್ನಡ 34 ಹಾಗು ಚಿಕ್ಕಮಗಳೂರಿನಲ್ಲಿ 3 ಸೇರಿ ಒಟ್ಟು 49 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಂದು ಸಾವು ಸಂಭವಿಸಿದೆ" ಎಂಬ ಮಾಹಿತಿ ನೀಡಿದರು.
"ಕೆಎಫ್ಡಿ ಪಾಸಿಟಿವ್ ಪ್ರಕರಣ ಪತ್ತೆಯಾದ ತಕ್ಷಣ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬೇಕು. ರೋಗ ಪ್ರಸರಣ ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್ವರೆಗೆ ಇರುತ್ತದೆ. ತಾಲೂಕು ಆಸ್ಪತ್ರೆಗಳಾದ ತೀರ್ಥ ಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಬೇಕು. ಅಗತ್ಯ ಔಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು" ಎಂದರು.
ಸೋಂಕಿತರಿಗೆ ಎಬಿಎಆರ್ಕೆ ಅಡಿ ರೆಫರ್ ಮಾಡಿ ಉಚಿತ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರಿಗೆ ಸೂಚಿಸಿದರಲ್ಲದೆ, ಜನರಿಗೆ ಕಾಯಿಲೆ ಕುರಿತು ಅರಿವು ಹೆಚ್ಚಿಸಲು ಮಾಹಿತಿ, ಶಿಕ್ಷಣ ಸಂವಹನ ಚಟುವಟಿಕೆಗಳನ್ನು ನಡೆಸುವಂತೆ ಸೂಚನೆ ನೀಡಿದರು.