ಹಾವೇರಿ:''ಮೈತ್ರಿಕೂಟದ ಎಂಪಿ ಅಭ್ಯರ್ಥಿಯ ಕರ್ಮಕಾಂಡದ ಬಗ್ಗೆ ಒಂದೇ ಒಂದು ಮಾತನ್ನು ಮೋದಿ, ಅಮಿತ್ ಶಾ ಹೇಳದಿರುವುದು ದುರಾದೃಷ್ಟಕರ'' ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ಇಡೀ ದೇಶವೇ ತಲೆತಗ್ಗಿಸುವ ಕೆಲಸವನ್ನು ಪ್ರಜ್ವಲ್ ರೇವಣ್ಣ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣಗೆ ನಾಚಿಕೆ ಆಗಬೇಕು. ನಮ್ಮ ಸರ್ಕಾರ ಎಸ್ಐಟಿ ಮೂಲಕ ತನಿಖೆಗೆ ಮುಂದಾಗಿದೆ. ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಆಗಬೇಕು. ಅವರ ತಂದೆ ರೇವಣ್ಣ ಅವರು ಅದನ್ನು ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಮೋದಿ, ಅಮಿತ್ ಶಾ ಅವರು ಅದಕ್ಕೆ ಉತ್ತರ ಕೊಡಬೇಕು'' ಎಂದು ಸಲೀಂ ಅಹ್ಮದ್ ಕಿಡಿಕಾರಿದ್ದಾರೆ.
''ಮೈತ್ರಿಕೂಟದ ಎಂಪಿ ಕರ್ಮಕಾಂಡದ ಬಗ್ಗೆ ಒಂದೇ ಒಂದು ಮಾತನ್ನು ಹೇಳದಿರುವುದು ದುರಾದೃಷ್ಟಕರ. ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆಗಿದೆ. ಈ ವ್ಯವಸ್ಥೆಯಲ್ಲಿ ಇಂತಹ ವ್ಯಕ್ತಿಗಳು ಇರಬಾರದು. ಇವರಿಂದ ರಾಜಕಾರಣಕ್ಕೆ ಕೆಟ್ಟ ಹೆಸರು ಬರುತ್ತದೆ'' ಎಂದು ಆರೋಪಿಸಿದರು.