ಮುಡಾ ಅಧ್ಯಕ್ಷ ಕೆ. ಮರೀಗೌಡ ಹೇಳಿಕೆ (ETV Bharat) ಮೈಸೂರು:ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸಹ ತಮ್ಮ ಹೆಂಡತಿ ಶಾಂತಮ್ಮ ಹೆಸರಿನಲ್ಲಿ ಮುಡಾದಿಂದ ಬದಲಿ ನಿವೇಶನ ಪಡೆದಿದ್ದಾರೆ ಎಂದು ಮುಡಾದ ಅಧ್ಯಕ್ಷ ಕೆ.ಮರೀಗೌಡ ಪತ್ರಿಕಾಗೋಷ್ಠಿಯಲ್ಲಿ ಹೆಚ್.ವಿಶ್ವನಾಥ್ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಇಂದು ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮುಡಾ ಅಧ್ಯಕ್ಷ ಕೆ. ಮರೀಗೌಡ ಹಾಗೂ ಶಾಸಕ ಹರೀಶ್ ಗೌಡ ಮಾಧ್ಯಮಾಗೋಷ್ಠಿ ನಡೆಸಿದರು. 'ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮುಡಾದ ಹಗರಣಗಳ ಬಗ್ಗೆ, ಬದಲಿ ನಿವೇಶನ ಹಾಗೂ 50:50 ಅನುಪಾತದ ನಿವೇಶನ ಹಂಚಿಕೆಯಲ್ಲಿ ಆಗಿರುವ ದುರ್ಬಳಕೆ ಕುರಿತು ಆರೋಪ ಮಾಡಿದ್ದು, ಈ ಆರೋಪ ಸರಿಯಲ್ಲ. ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿಯ ಹೆಸರಿನಲ್ಲಿ ಪಡೆದ ಬದಲಿ ನಿವೇಶನ ಕಾನೂನು ಪ್ರಕಾರವೇ ನಡೆದಿದೆ ಎಂದು ಮರೀಗಾಡ ಹೇಳಿದರು.
ಮುಂದುವರೆದು, "ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಮ್ಮ ಹೆಂಡತಿ ಶಾಂತಮ್ಮ ಹೆಸರಿನಲ್ಲಿ ದೇವನೂರು 3ನೇ ಹಂತದಲ್ಲಿ 2017 ರಲ್ಲಿ 60/40 ಅಳತೆಯ ನಿವೇಶನ ಪಡೆದು ಬಳಿಕ ಅದೇ ನಿವೇಶನವನ್ನು ಮುಖ್ಯ ರಸ್ತೆಯಲ್ಲಿರುವ ನಿವೇಶನಕ್ಕೆ ಬದಲು ಮಾಡಿಕೊಂಡು ಬದಲಿ ನಿವೇಶನ ಪಡೆದಿದ್ದಾರೆ. ವಿಶ್ವನಾಥ್ ಕೀಳುಮಟ್ಟದ ರಾಜಕಾರಣ ಮಾಡುತ್ತಾ, ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ರಾಜಕೀಯ ದಿವಾಳಿ ಆಗಿದ್ದಾರೆ" ಎಂದು ಆರೋಪಿಸಿದರು. ಮುಡಾದಲ್ಲಿ ನಡೆದಿರುವ ಎಲ್ಲ ಅಕ್ರಮಗಳು ತನಿಖೆಯಾಗುತ್ತಿದ್ದು, ಈ ಹಂತದಲ್ಲಿ ಹೆಚ್ಚು ಮಾತನಾಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಮರೀಗೌಡ ಹೇಳಿಕೆ ನೀಡಿದರು.
'ನಿವೇಶನ ವಾಪಸ್ ಪಡೆಯಲಾಗಿದೆ'-ಮರೀಗೌಡ:ಸಿದ್ದರಾಮಯ್ಯ ಆಪ್ತ ಹಿನಕಲ್ ಪಾಪಣ್ಣಗೆ ಮುಡಾದಿಂದ ನೀಡಲಾಗಿದ್ದ, ಬದಲಿ ನಿವೇಶನವನ್ನು ಹಗರಣದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದು, ಅವರಿಗೆ ಸೇರಿದ ಸರ್ವೆ ನಂಬರ್ 211 ರಲ್ಲಿ 3.05. ಕುಂಟೆ ಜಮೀನನ್ನು 1981 ರಲ್ಲಿ ಸ್ವಾಧೀನಕ್ಕೆ ಪಡೆದು 1984 ರಲ್ಲಿ ಕೈ ಬಿಡಲಾಗಿತು. ಇದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಆಪ್ತ ಹಿನಕಲ್ ಪಾಪಣ್ಣ 2024 ರಲ್ಲಿ ಮುಡಾದಿಂದ ವಿಜಯನಗರದ ವಿವಿಧ ಬಡಾವಣೆಗಳಲ್ಲಿ 20 ನಿವೇಶನ ನೀಡುವಂತೆ ಮುಡಾ ಆದೇಶ ಮಾಡಲಾಗಿದ್ದು, ಈ ಆದೇಶಕ್ಕೂ ಸದ್ಯ ತಡೆ ನೀಡಲಾಗಿದೆ ಎಂದು ಮರೀಗೌಡ ಹೇಳಿಕೆ ನೀಡಿದರು.
'ಮುಖ್ಯಮಂತ್ರಿಗಳ ಕುಟುಂಬಕ್ಕೆ ಕಾನೂನು ರೀತಿ ನಿವೇಶನ ನೀಡಲಾಗಿದೆ'- ಶಾಸಕ ಹರೀಶ್ ಗೌಡ: "ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ವಿರುದ್ಧ ಕೇಳಿ ಬರುತ್ತಿರುವ 50:50 ಅನುಪಾತದ ನಿವೇಶನ ಹಂಚಿಕೆ ವಿವಾದ, ವಿವಾದವಲ್ಲ. ಕಾನೂನು ರೀತಿಯೇ 50:50 ಅನುಪಾತದ ಅಡಿ ಅವರಿಗೇ ನಿವೇಶನ ನೀಡಲಾಗಿದೆ. 50:50 ಅನುಪಾತದ ಅಡಿ ನಿವೇಶನ ಕೊಡುವ ಬಗ್ಗೆ ಗೆಜೆಟ್ನಲ್ಲಿ ನೋಟಿಫಿಕೇಷನ್ ಆಗಿದ್ದು, 2015ರಲ್ಲಿ 40/60 ಅನುಪಾತದಲ್ಲಿ ನಿವೇಶನ ನೀಡುವ ಆದೇಶ ಇತ್ತು. ಬಳಿಕ 2020ರಲ್ಲಿ 50:50 ಅನುಪಾತದ ಅಡಿ ನಿವೇಶನ ಕೊಡುವ ಆದೇಶವಾಗಿದ್ದು, ಅದರನ್ವಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೂ ನಿವೇಶನ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮೈಸೂರು ನಗರದ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ವಿವರಿಸಿದ್ದಾರೆ.
ಇದನ್ನೂ ಓದಿ:'ನಾವು ಯಾವುದನ್ನೂ ಮುಚ್ಚಿ ಹಾಕುವುದಿಲ್ಲ, ಎಲ್ಲ ಪ್ರಕರಣಗಳ ತನಿಖೆ ನಡೆಯುತ್ತದೆ' - G Parameshwar