ಬೆಂಗಳೂರು/ ಬೆಳಗಾವಿ : ರಾಜ್ಯದಲ್ಲಿ 50 ಗ್ರಾಮ ಪಂಚಾಯ್ತಿ ಹಾಗೂ ಪಟ್ಟಣ ಪಂಚಾಯ್ತಿಗಳನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಇದ್ದು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ (ಭೈರತಿ) ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದಿನಕರ್ ಕೇಶವ ಶೆಟ್ಟಿ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ರಹೀಮ್ ಖಾನ್ ಅವರು ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಮದ್ಯಪ್ರವೇಶಿಸಿದ ಸಚಿವ ಸುರೇಶ್, 2011ರ ಜನಗಣತಿ ಪ್ರಕಾರ ಮೇಲ್ದರ್ಜೆಗೇರಿಸಲು ಅವಕಾಶವಿಲ್ಲ. ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ರಾಜ್ಯಾದ್ಯಂತ ಒಂದೇ ಮಾನದಂಡವಿದೆ. 2011ರ ಜನಗಣತಿಯ ಪ್ರಕಾರ 13539 ಜನಸಂಖ್ಯೆ ಇದೆ. 2015, ಮಾರ್ಚ್ 19ರ ಸಚಿವ ಸಂಪುಟದಲ್ಲಿ, 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಅರ್ಹ ಗ್ರಾಮಪಂಚಾಯ್ತಿಗಳನ್ನು ಮಾತ್ರ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ವಿವರ ನೀಡಿದರು
ಗೋಕರ್ಣ ಪಂಚಾಯ್ತಿ ಮೇಲ್ಡರ್ಜೆಗೆ ಏರಿಸಲು ಮನವಿ: ಗೋಕರ್ಣ ಪಂಚಾಯ್ತಿ ಮೇಲ್ದರ್ಜೆಗೆ ಏರಿಸುವ ಕುರಿತು ಮಾತನಾಡಿದ ಅವರು, ಗೋಕರ್ಣಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದು ನಿಜ. ಗೋಕರ್ಣದ ಬಗ್ಗೆ ನಮಗೂ ವಿಶೇಷವಾದ ಪ್ರೀತಿ ಇದೆ. ಗೋಕರ್ಣ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೊದಲ ಆದ್ಯತೆಯಲ್ಲೇ ಮೇಲ್ದರ್ಜೆಗೇರಿಸಲು ಗಮನ ನೀಡುತ್ತೇವೆ. ಆದರೆ, ಅದು ಮಾನದಂಡ ಪೂರೈಸುತ್ತಿಲ್ಲ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದರು.