ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿದರು. ಶಿರಸಿ:ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಭಾಗವಹಿಸುವ ವಾತಾವರಣ ಬಿಜೆಪಿಯವರೇ ಇಟ್ಟಿಲ್ಲ. ಅವರಿಗೇ ನಾವು ಬೇಡ ಅಂದ್ರೆ ನಾವ್ಯಾಕೆ ಅವರು ಬೇಕು ಅಂತಾ ಹೋಗಬೇಕು ಎಂದು ಬಿಜೆಪಿ ವಿರುದ್ಧ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮತ್ತೆ ಅಸಮಾಧಾನ ಹೊರ ಹಾಕಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪ್ರಚಾರದ ಪೋಸ್ಟರ್‌ಗಳಲ್ಲಿ ನನ್ನ ಹಾಗೂ ಶಾಸಕ ದಿನಕರ ಶೆಟ್ಟಿಯವರ ಫೋಟೋ ಕೂಡ ತೆಗೆಯಲಾಗಿದೆ. ನೀರು ಹರಿದು ಹೋದ ಮೇಲೆ ಕಟ್ಟೆ ಹಾಕಿ ಏನೂ ಪ್ರಯೋಜನವಿಲ್ಲ. ನೀರು ನಿಲ್ಲಬೇಕು ಅಂದ್ರೆ ಹರಿದು ಹೋಗುವ ಮೊದಲೇ ಕಟ್ಟೆ ಹಾಕಬೇಕು. ಹರಿದು ಹೋದ ಮೇಲೆ ಕಟ್ಟೆ ಒಂದೇ ಉಳಿಯುತ್ತೆ. ನೀರು ಉಳಿಯಲ್ಲ ಎಂದು ಪಕ್ಷಕ್ಕೆ ಟಾಂಗ್ ನೀಡಿದರು.
ಇನ್ನು ತಮ್ಮ ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರಿರೋ ವಿಚಾರ ಕುರಿತು ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ಪತಿ ಒಂದು ಪಕ್ಷ, ಪತ್ನಿ ಒಂದು ಪಕ್ಷದಲ್ಲಿ ಸ್ಪರ್ಧಿಸಿದ್ದಾರೆ. ಬಿಜೆಪಿಯ ಮುಖಂಡರು ಒಂದು ಪಕ್ಷ, ಅವರ ಪುತ್ರ ಒಂದು ಪಕ್ಷದಲ್ಲಿ ಇದ್ದಿದ್ದೂ ಇದೆ. ರಾಜಕಾರಣದಲ್ಲಿ ಅವರೊಂದು ಕಡೆ, ನಾವೊಂದು ಕಡೆ ಇರಬಾರದು ಅಂತ ಏನಿಲ್ಲ, ಇರಬಹುದು. ಯಾರು ಯಾವ ಪಕ್ಷದಲ್ಲಿ ಬೇಕಾದ್ರೂ ಇರಬಹುದು. ಮನೆಯಲ್ಲಿ ಕೂತರೆ ಯಾರೂ ಏನೂ ತಂದು ಕೊಡಲ್ಲ. ರಾಜಕಾರಣದಲ್ಲಿ ಶ್ರಮಪಟ್ಟು ದುಡಿಯಬೇಕು, ಶ್ರಮಪಟ್ಟು ಮೇಲೆ ಹೋಗ್ಬೇಕು ಎಂದು ತಿಳಿಸಿದರು.
ಇನ್ನು, ಬಿಜೆಪಿಯಲ್ಲಿ ರಾಜ್ಯ, ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬಂದ್ರೆ ಭಾಗವಹಿಸೋಕೆ ವಿಚಾರ ಮಾಡ್ತೀನಿ ಎಂದು ಪ್ರಚಾರ ಸಭೆಯಲ್ಲಿ ಭಾಗವಹಿಸುವ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೆಬ್ಬಾರ್ ಮಾತನಾಡಿದರು.
ಇದನ್ನೂ ಓದಿ:ಅಪಾಯಕಾರಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಅಧಿಕಾರಕ್ಕೆ ತರಬೇಡಿ: ಮೋದಿ - PM Modi campaign