ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆಯಲ್ಲಿ ನಮ್ಮ ಕೆಲಸಕ್ಕೆ ಕೇರಳದವರು ಅಡ್ಡಿ ತರಬೇಡಿ ಎಂದು ಶಾಸಕ ಸೈಲ್ ಮನವಿ (ETV Bharat) ಕಾರವಾರ: ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆಗೆ ಸಹಕರಿಸಲು ಆಗಮಿಸಿದ ಕೇರಳದವರಿಗೆ, "ನಾವು ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ. ಬುಧವಾರ ನೀರಿನಿಂದ ಮಣ್ಣು ತೆಗೆದು ಕಾರ್ಯಾಚರಣೆ ಮಾಡಲಾಗುವುದು" ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
"ಎಂಟನೇ ದಿನದ ಕಾರ್ಯಾಚರಣೆ ಮುಗಿದಿದೆ. ಗುಡ್ಡದ ಪಕ್ಕದಲ್ಲಿ ಲಾರಿ ಇಲ್ಲ. ನೀರಿನಲ್ಲಿ ಬಿದ್ದಿರುವುದು ಕಂಡುಬಂದಿದ್ದು ಬುಧವಾರ ಮಣ್ಣು ತೆಗೆದು ಕಾರ್ಯಾಚರಣೆ ಮಾಡಲಾಗುವುದು" ಎಂದರು.
ಕೇರಳದ ಚಾಲಕ ಅರ್ಜುನ್ ಬೆಳಗ್ಗಿನ ಜಾವ 3.27ಕ್ಕೆ ಇಲ್ಲಿ ಇದ್ದರೆಂಬ ಮಾಹಿತಿ ದೊರೆತಿದೆ. ಎರಡು ಲಾರಿ ಆತನ ಜೊತೆಯಲ್ಲಿದ್ದು ಒಂದು ಲಾರಿಯ ಚಾಲಕನಿಗೆ ಆತ, ತನಗೆ ನಿದ್ದೆ ಬರುತ್ತಿದೆ ಎಂದು ಹೇಳಿ ಕಳುಹಿಸಿದ್ದ. ಇದಾದ ನಂತರ ಕುಸಿತ ಸಂಭವಿಸಿದೆ. ಮೆಟಲ್ ಡಿಟೆಕ್ಟರ್ ತಂದು ಪರಿಶೀಲಿಸಿದಾಗ ಸರಿಯಾಗಿ ಮಾಹಿತಿ ಸಿಕ್ಕಿಲ್ಲ. ನಾಳೆಯಿಂದ ಪೊಕ್‌ಲೈನ್ ತಂದು ಕಾರ್ಯಾಚರಣೆ ಮಾಡಲಾಗುವುದು. ಅಲ್ಲದೇ ದೆಹಲಿಯಿಂದ ನೀರಿನೊಳಗೆ ಹೋಗಿ ಪರಿಶೀಲಿಸುವ ಡ್ರೋನ್ ತರಲಾಗುವುದು. ಈ ಬಗ್ಗೆ ಸರ್ಕಾರದ ಅನುಮತಿ ಕೇಳಿದ್ದೇವೆ" ಎಂದು ತಿಳಿಸಿದರು.
ಕೇರಳದವರು ನಮ್ಮ ಕೆಲಸಕ್ಕೆ ಅಡ್ಡಿ ಮಾಡಬೇಡಿ-ಸೈಲ್:"ಎಂಟು ದಿನದಿಂದ ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದ್ದೇವೆ. ಹಾಗಿದ್ದೂ, ಕೇರಳದವರು ಜಿಲ್ಲಾಡಳಿತ ಕೆಲಸ ಮಾಡುತ್ತಿಲ್ಲ ಎನ್ನಬಾರದು. ಕೇರಳದ ಶಾಸಕರು, ಸಂಸದರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಅವರಿಗೆ ಸಹಕಾರ ನೀಡುತ್ತಿದ್ದೇವೆ. ಬೆಂಜ್ ಲಾರಿಯ ಕಂಪನಿಯು ಬೆಳಗ್ಗೆ 8.40ಕ್ಕೆ ಅರ್ಜುನ್ ಅವರಿದ್ದ ಲಾರಿಯ ಜಿಪಿಎಸ್ ಬಂದ್ ಆಗಿರುವ ಮಾಹಿತಿ ನೀಡಿದ್ದಾರೆ. ನಮ್ಮ ಜಿಲ್ಲೆಯವರ ಎರಡು ದೇಹ ಸಿಗಬೇಕಿದ್ದು ಕಾರ್ಯಾಚರಣೆಯಲ್ಲಿ ಯಾವುದೇ ತಾರತಮ್ಯವಿಲ್ಲ. ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ. ಸ್ವತಃ ಸಿಎಂ, ಸಚಿವರು, ಬೇರೆ ಕ್ಷೇತ್ರದ ಶಾಸಕರು ಸ್ಥಳಕ್ಕೆ ಬಂದಿದ್ದಾರೆ. ನದಿಯಲ್ಲಿ ಹುಡುಕಾಟ ಮಾಡಲು ಮುಂದಾದಾಗ ಮಣ್ಣಿನಡಿ ಹುಡುಕಾಟ ಮಾಡಿ ಎಂದು ಕೇರಳದವರು ಒತ್ತಾಯಿಸಿದ್ದರು. ನಮ್ಮ ಕೆಲಸಕ್ಕೆ ನೀವು ಅಡ್ಡಿ ಮಾಡಬೇಡಿ" ಎಂದು ಸತೀಶ್ ಸೈಲ್ ಮನವಿ ಮಾಡಿದರು.
ಶಾಸಕ ಸೈಲ್ ತುಂಬಾ ಕೆಲಸ ಮಾಡಿದ್ದಾರೆ-ಕೇರಳ ಶಾಸಕ: ಕೇರಳ ಶಾಸಕ ಅಶ್ರಫ್ ಮಾತನಾಡಿ, "ಕೇರಳ ಲಾರಿ ಚಾಲಕ ಅರ್ಜುನ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್ ಸೈಲ್ ನೀಡಿದ ಸಹಕಾರ ಖುಷಿ ನೀಡಿದೆ. ಕರ್ನಾಟಕದ ಕಾರ್ಯಾಚರಣೆಗೆ ಯಾರೂ ಅಡ್ಡಿ ಮಾಡಬೇಡಿ. ಎಂಟು ದಿನ ಸದನಕ್ಕೆ ಹೋಗದೇ ಸೈಲ್ ನಮ್ಮೊಟ್ಟಿಗೆ ಸಹಕಾರ ನೀಡಿದ್ದಾರೆ. ವಿಧಾನಸಭೆಗೆ ಹೋಗದೇ ಕಾರ್ಯಾಚರಣೆಗೆ ಸಹಕರಿಸಿದ ಅವರ ಕಾರ್ಯವನ್ನು ಎಲ್ಲರೂ ಮೆಚ್ಚಬೇಕು" ಎಂದರು.
"ಸಿಎಂ ಸಿದ್ದರಾಮಯ್ಯನವರನ್ನು ನಮಗೆ ಭೇಟಿ ಮಾಡಿಸಿ ಅವರ ಬಳಿಯೂ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕೇರಳದಲ್ಲಿ ಅರ್ಜುನ್ ಕುಟುಂಬದವರು ನ್ಯಾಯಾಲಯ ಮೊರೆ ಹೋಗಲು ಮುಂದಾಗಿದ್ದಾರೆ. ಈ ರೀತಿ ಮಾಡಿದಾಗ ಕಾರ್ಯಾಚರಣೆಗೆ ಅಡ್ಡಿಯಾಗಲಿದ್ದು ನಾವು ಕೇರಳ ಸರ್ಕಾರದ ಬಳಿಯೂ ಮನವಿ ಮಾಡಿಕೊಂಡು ಅರ್ಜುನ್ ಕುಟಂಬಕ್ಕೆ ಮಾಹಿತಿ ನೀಡುವಂತೆ ತಿಳಿಸುತ್ತೇವೆ. ಪ್ರತಿ ಹಂತದ ಕಾರ್ಯಾಚರಣೆಯನ್ನೂ ನೋಡಿದ್ದು ಯಾವುದೇ ಅಸಮಾಧಾನ ಇಲ್ಲ" ಎಂದು ಅಶ್ರಫ್ ಹೇಳಿದರು.
ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ 7 ಮೃತದೇಹ ಪತ್ತೆ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ - Shiruru Hill Collapse Case