ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆಕೊಟ್ಟಿರುವ ಮತದಾರರಿಗೆ ಉತ್ತರಿಸಿ ಅಭಿಯಾನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಇಂದು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಹು-ಧಾ ಪೂರ್ವ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ತಾವು ತಂದಿರುವ ಅನುದಾನ, ಸರ್ಕಾರದಿಂದ ಬಿಡುಗಡೆ ಮಾಡಿರುವ ಅನುದಾನ ಹಾಗೂ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ವಿವರ ನೀಡುವಂತೆ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ತಮ್ಮ ಮೇಲೆ ಭರವಸೆಯಿಟ್ಟು ಜನರು ಆಯ್ಕೆ ಮಾಡಿ ಕಳಿಸಿದ್ದಾರೆ. ಇದೀಗ ಮೇ 13, 2023ಕ್ಕೆ ಚುನಾಯಿತರಾಗಿ ಒಂದು ವರ್ಷ ಪೂರೈಸುವ ಹೊಸ್ತಿಲಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆರಂಭವಾಗಿಲ್ಲ. ಈ ಕಾರಣ ತಾವುಗಳು ಶಾಸಕರಾದ ಬಳಿಕ ಕ್ಷೇತ್ರಕ್ಕೆ ತಂದ ಹಣವೆಷ್ಟು? ಬಿಡುಗಡೆಯಾದ ಅನುದಾನವೆಷ್ಟು? ಅನುದಾನ ಬಿಡುಗಡೆಗೊಂಡ ನಂತರ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯಾವವು? ಎಂಬುದು ಸೇರಿದಂತೆ ಇನ್ನಿತರ ಮತದಾರರ ಪ್ರಶ್ನೆಗೆ ಉತ್ತರಿಸಿ ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸಿ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಜನರು ಮತ್ತು ಸ್ವತಃ ಕಾಂಗ್ರೆಸ್ ಶಾಸಕರುಗಳಿಂದಲೇ ಈ ಮಾತು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿಯಿಂದ ಮತದಾರರಿಗೆ ಉತ್ತರಿಸಿ ಎಂಬ ಅಭಿಯಾನ ಆರಂಭಿಸಿದ್ದು, ಇದರಿಂದ ಶಾಸಕರು ತಂದಿರುವ ಅನುದಾನವೆಷ್ಟು ಎಂಬುದನ್ನು ಮತದಾರರಿಗೆ ತಿಳಿಸುತ್ತಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ ಅಭಿವೃದ್ಧಿ ದೃಷ್ಟಿಯಿಂದ ತಾರತಮ್ಯ ಮಾಡದೇ ಹಣ ಬಿಡುಗಡೆ ಮಾಡಿದ್ದೇವೆ. ಆದರೆ ಇದೀಗ ಬಿಜೆಪಿಯ ಶಾಸಕರಿಗೆ ಕಾಂಗ್ರೆಸ್ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.
ಬಳಿಕ ಬಿಜೆಪಿ ಮತದಾರರಿಗೆ ಉತ್ತರಿಸಿ ಅಭಿಯಾನದ ಕುರಿತು ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ಇದು ಬಿಜೆಪಿಯವರು ಕಾಂಗ್ರೆಸ್ ಶಾಸಕರು ಮಾಡಿರುವ ಅಭಿವೃದ್ಧಿ ಬಗ್ಗೆ ಮನವಿ ಮೂಲಕ ಕೇಳಿದ್ದಾರೆ. ಆದರೆ ಈ ಅಭಿವೃದ್ಧಿ ಚುನಾವಣೆ ಗಿಮಿಕ್ ಆಗಿದೆ. ಯಾವುದೊ ಒಂದು ವೇವ್ ಕ್ರಿಯೇಟ್ ಮಾಡಬೇಕು ಎಂದು ಮಾಡುತ್ತಿದ್ದಾರೆ. ನಾಲ್ಕು ವರ್ಷ ಬಿಜೆಪಿ ಕೆಲಸ ಮಾಡಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಅವರ ಸಾಧನೆ ಶೂನ್ಯ. ಅವರ ಅಧಿಕಾರಾವಧಿಯಲ್ಲಿ ಕ್ಷೇತ್ರಕ್ಕೆ ಬಂದ ಅನುದಾನ ಹೇಳಿದ್ರೆ ಅವರಿಗೆ ಮುಜುಗರವಾಗುತ್ತದೆ. ನಮ್ಮ ಮನೆಗೆ ಬರುವುದಕ್ಕೂ ಮುನ್ನ ನಮ್ಮ ಕ್ಷೇತ್ರಕ್ಕೆ ಬಂದ ಅನುದಾನ ಎಷ್ಟು ಎಂಬ ಮಾಹಿತಿ ತಂದಿದ್ದರೆ ಅವರು ಮುಜುಗುರಕ್ಕೆ ಒಳಗಾಗುತ್ತಿರಲಿಲ್ಲ ಎಂದು ಲೇವಡಿ ಮಾಡಿದರು.