ಬೆಂಗಳೂರು :ನಮ್ಮ ತಂದೆಗೆ ವಯಸ್ಸಾಗಿದೆ. ಅವರು ಪ್ರಸ್ತುತ ರಾಜಕಾರಣದಲ್ಲಿಲ್ಲ. ಅವರು ಯಾವುದೇ ರೀತಿಯ ಹೇಳಿಕೆ ನೀಡಬಾರದೆಂದು ನಾನು ಅವರಿಗೆ ಮನವಿ ಮಾಡುವೆ ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಹೇಳಿಕೆಗೆ ಅವರ ಪುತ್ರ, ಶಾಸಕ ಪ್ರಕಾಶ್ ಕೋಳಿವಾಡ ಬೇಸರ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ರಾಜಕಾರಣಕ್ಕೆ ಬರಲು ಸಿಎಂ ಸಿದ್ದರಾಮಯ್ಯನವವರೇ ಕಾರಣ. ನಾನು ಸಿದ್ದರಾಮಯ್ಯ ಬೆಂಬಲಿಗ. ನಾನು ಬುದ್ಧ ಬಸವ ಅಂಬೇಡ್ಕರ್ ವಾದಿ ಎನ್ನುವ ಮೂಲಕ ತಂದೆಯ ಹೇಳಿಕೆಗೆ ಭಿನ್ನವಾದ ಹೇಳಿಕೆ ನೀಡಿದ್ದಾರೆ.
ನಮ್ಮ ತಂದೆಗೆ ನಾಲ್ಕು ಆಪರೇಷನ್ ಆಗಿವೆ. ಹಾಗಾಗಿ ಇದರ ಬಗ್ಗೆ ಮಾತನಾಡುವುದು ಬೇಡ. ನಾನು ಅವರಿಗೆ ಹೇಳುವಷ್ಟು ದೊಡ್ಡವನೂ ಅಲ್ಲ. ಆದರೆ, ಇಂತಹ ಹೇಳಿಕೆಗಳನ್ನು ಕೊಡಬೇಡಿ ಎಂದು ನಾನು ಅವರಿಗೆ ಮನವಿ ಮಾಡ್ತೇನೆ ಎಂದರು.
ಮೊದಲಿನಿಂದಲೂ ನಾನು ನಿಮ್ಮ ಅನುಯಾಯಿ. ನಿಮ್ಮ ಕಾರಣದಿಂದಲೇ ರಾಜಕಾರಣಕ್ಕೆ ಬರಲು ಸಾಧ್ಯವಾಗಿದೆ. ನಮ್ಮ ತಂದೆಯವರು ನಿಮ್ಮ ಬಗ್ಗೆ ಹೇಳಿಕೆ ನೀಡಿದ್ದು ನನಗೂ ಬೇಸರವಾಯಿತು. ಹಾಗಾಗಿ ಇದರ ಬಗ್ಗೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.