ಬೆಂಗಳೂರು: ಆರ್.ಆರ್ ನಗರ ಕ್ಷೇತ್ರದಲ್ಲಿ ಚುನಾವಣೆ ಪಾರದರ್ಶಕವಾಗಿ ನಡೆಯಬೇಕೆಂದರೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಇಲ್ಲವಾದಲ್ಲಿ, ಕ್ಷೇತ್ರದಲ್ಲಿ ಡಿಜೆ ಹಳ್ಳಿ - ಕೆಜೆ ಹಳ್ಳಿ ಪ್ರಕರಣದಂತೆ ಎಷ್ಟು ಹೆಣಗಳನ್ನು ಬೀಳುತ್ತವೋ ಗೊತ್ತಿಲ್ಲ, ಅದಕ್ಕಾಗಿ ಕ್ಷೇತ್ರದಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜಿಸಬೇಕೆಂದು ಶಾಸಕ ಮುನಿರತ್ನ ಆಗ್ರಹಿಸಿದ್ದಾರೆ.
ವೈಯಾಲಿಕಾವಲ್ನಲ್ಲಿರುವ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿರುವ ಅನ್ಯಾಯ ಖಂಡಿಸಿ ಇಂದು ಸುದ್ದಿಗೋಷ್ಠಿ ಮಾಡುತ್ತಿದ್ದೇನೆ, ಯಶವಂತಪುರ ರೈಲು ನಿಲ್ದಾಣಕ್ಕೆ ಎಲ್ಲ ಭಾಗಗಳಿಂದಲೂ ರೈಲುಗಳು ಬರುತ್ತವೆ, ನಮ್ಮ ಸರ್ಕಾರ ಇದ್ದಾಗ ಜನರು ಓಡಾಡಲು ಅಲ್ಲಿ ಅಲ್ಲಿ ಒಂದು ರಸ್ತೆ ಮಾಡಲಾಗಿತ್ತು, ಪಕ್ಕದಲ್ಲೇ ಹೆರಿಗೆ ಆಸ್ಪತ್ರೆ, ಕೋವಿಡ್ ಆಸ್ಪತ್ರೆ ಇದೆ, ಜನರಿಂದ ಕೂಡಾ ಈ ರಸ್ತೆಯ ಸದ್ಬಳಕೆ ಹೆಚ್ಚಾಗಿಯೇ ಇತ್ತು. ಆದರೆ, ಇದೀಗ ಅಲ್ಲಿರುವ ದನದ ಮಾಂಸ ಮಾರಾಟ ಮಾಡುವ ವ್ಯಾಪಾರಿಗಳು ಈ ರಸ್ತೆಯಿಂದ ತೊಂದರೆ ಆಗುತ್ತಿದೆ. ಇತ್ತೀಚೆಗೆ ದನದ ಮಾಂಸ ವ್ಯಾಪಾರಿಗಳೇ ಜೆಸಿಬಿ ತಂದು ರಸ್ತೆ ತೆರವು ಮಾಡಿದ್ದಾರೆ, 50 ಸಾವಿರ ಜನ ಓಡಾಡುವ ರಸ್ತೆ ಒಡೆದು ಹಾಕಲಾಗಿದೆ, ರಸ್ತೆಯ ಸಾಮಗ್ರಿಗಳನ್ನು ಕದ್ದೊಯ್ಯಲಾಗಿದೆ, ಸರ್ಕಾರದ ಆಸ್ತಿಯನ್ನು ದನದ ಮಾಂಸ ವ್ಯಾಪಾರಿಗಳು ನಾಶ ಮಾಡಿದ್ದಾರೆ, ಇದು ನನ್ನ ಕ್ಷೇತ್ರದಲ್ಲಿ ಆಗಿರುವ ಅನ್ಯಾಯ, ಕಾಂಗ್ರೆಸ್ ಪಕ್ಷದ ಮುಖಂಡ ಹನುಮಂತರಾಯಪ್ಪ ಮುಂದೆ ನಿಂತು ಈ ರಸ್ತೆ ಒಡೆಸಿ ಹಾಕಿದ್ದಾರೆ ಎಂದು ಮುನಿರತ್ನ ಗಂಭೀರ ಆರೋಪ ಮಾಡಿದರು.
ರಸ್ತೆ ಒಡೆದು ಹಾಕಿಸಿದ ಫೊಟೋ, ವಿಡಿಯೋಗಳನ್ನು ರಿಲೀಸ್ ಮಾಡಿ ತಮ್ಮ ಮಾತು ಮುಂದುವರೆಸಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರಿಗೆ ಕಾಂಗ್ರೆಸ್ ಆಮಿಷ ಒಡ್ಡುತ್ತಿದೆ, ಜನರಿಗೆ ಹಂಚಲು ಕುಕ್ಕರ್, ಸೀರೆ ಸಂಗ್ರಹ ಮಾಡಲಾಗಿದೆ, ಅಧಿಕಾರಿಗಳು ಇದರ ತಪಾಸಣೆ ಮಾಡುತ್ತಿಲ್ಲ, ದಾಳಿ ಮಾಡಿ ವಶಪಡಿಸಿಕೊಳ್ಳುತ್ತಿಲ್ಲ, ದಾಳಿ ಮಾಡಿದರೆ ನಮಗೆ ತೊಂದರೆ ಆಗುತ್ತದೆ ಅಂತ ಹೆದರುತ್ತಿದ್ದಾರೆ. 8 ಲಕ್ಷ ಕುಕ್ಕರ್ಗಳನ್ನು ಹಂಚಲು ಸಂಗ್ರಹ ಮಾಡಿಟ್ಟಿದ್ದಾರೆ, ಮನೆಗಳಿಗೆ ಹೋಗಿ ದುಡ್ಡು ಕೊಡುತ್ತಿದ್ದಾರೆ, ಕ್ಷೇತ್ರದಲ್ಲಿ ಸಾಕಷ್ಟು ಚುನಾವಣಾ ಅವ್ಯವಹಾರ ನಡೆಯುತ್ತಿದೆ, ಈ ಚುನಾವಣೆ ಪಾರದರ್ಶಕವಾಗಿ ನಡೆಯಬೇಕೆಂದ್ರೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು, ಇಲ್ಲವಾದಲ್ಲಿ ಆರ್ ಆರ್ ನಗರ ಕ್ಷೇತ್ರದಲ್ಲಿ ಡಿಜೆ ಹಳ್ಳಿ - ಕೆಜೆ ಹಳ್ಳಿ ಪ್ರಕರಣದಂತೆ ಎಷ್ಟು ಹೆಣಗಳನ್ನು ಬೀಳುತ್ತವೋ ಗೊತ್ತಿಲ್ಲ, ಅದಕ್ಕಾಗಿ ಪ್ಯಾರಾ ಮಿಲಿಟರಿ ಫೋರ್ಸ್ ಕ್ಷೇತ್ರಕ್ಕೆ ನಿಯೋಜಿಸಬೇಕೆಂದು ಆಗ್ರಹಿಸಿದರು.