ಬೆಂಗಳೂರು:ಆರ್ಎಸ್ಎಸ್ ನಾಯಕರ ಸಮ್ಮುಖದಲ್ಲಿ ರಾಜ್ಯ ಬಿಜೆಪಿಯಲ್ಲಿನ ಬಣಗಳ ಒಗ್ಗೂಡಿಸುವ ಕಾರ್ಯ ಸಫಲವಾದರೂ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ. ಮಾಧ್ಯಮಗಳ ಎದುರು ಒಗ್ಗಟ್ಟಿನ ಮಂತ್ರ ಜಪಿಸಿದರೂ, ಬಸನಗೌಡ ಪಾಟೀಲ್ ಯತ್ನಾಳ್ ತಂಡ ಪ್ರತ್ಯೇಕವಾಗಿಯೇ ಚಟುವಟಿಕೆಯಲ್ಲಿ ತೊಡಗಿರುವುದು ಇಂದಿನ ರಾಜ್ಯಪಾಲರ ಭೇಟಿಯಿಂದ ಸ್ಪಷ್ಟವಾಗಿದೆ. ವಾಲ್ಮೀಕಿ ಹಗರಣ ಪ್ರಕರಣ ಸಂಬಂಧ ರಾಜ್ಯಪಾಲರಿಗೆ ಟೀಂ ಬಿಜೆಪಿ ಬದಲು, ಟೀಂ ಯತ್ನಾಳ್ ನಿಯೋಗ ದೂರು ನೀಡಿರುವುದು ಇದಕ್ಕೆ ನಿದರ್ಶನವಾಗಿದೆ.
ರಾಜಭವನಕ್ಕೆ ಯತ್ನಾಳ್ ನಿಯೋಗ ಭೇಟಿ:ರಾಜಭವನಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ ಮುಖಂಡರ ನಿಯೋಗ ಭೇಟಿ ನೀಡಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಕಾಂಗ್ರೆಸ್ ವಿರುದ್ಧ ದೂರು ಸಲ್ಲಿಸಿತು. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಡೆದಿದ್ದು, ರಾಜ್ಯ ಕಾಂಗ್ರೆಸ್ ಪಕ್ಷದಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಮತ್ತು ದಲಿತ ಸಮುದಾಯಕ್ಕೆ ಮೀಸಲಾಗಿದ್ದ ಎಸ್ಸಿಪಿ ಟಿಎಸ್ಪಿ ಹಣವನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ನಿಯಮ ಉಲ್ಲಂಘಿಸಿದೆ ಎಂದು ಆರೋಪಿಸಿ ದೂರು ನೀಡಿತು.
ಆದರೆ, ಬಿಜೆಪಿ ನಿಯೋಗದಲ್ಲಿ ರೆಬೆಲ್ ಬಣದಲ್ಲಿ ಗುರುತಿಸಿಕೊಂಡವರನ್ನು ಬಿಟ್ಟು ಇತರ ಯಾರೂ ಇಲ್ಲದಿರುರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ನಿದರ್ಶನವಾಗಿದೆ. ರಾಜ್ಯ ಬಿಜೆಪಿಯ ಯಾವೊಬ್ಬ ಪದಾಧಿಕಾರಿಯೂ ಈ ನಿಯೋಗದಲ್ಲಿ ಇಲ್ಲದೇ ಇರುವುದು ಸಂಧಾನ ಮೇಲ್ನೋಟಕ್ಕೆ ಸಕ್ಸಸ್ ಆದರೂ, ಆಂತರಿಕ ಕಲಹ ಹಾಗೆಯೇ ಉಳಿದಿದೆ ಎನ್ನುವುದು ಸ್ಪಷ್ಟವಾಗಿದೆ.
ದೂರಿನ ಪತ್ರದಲ್ಲಿ ಯಾರೆಲ್ಲರ ಸಹಿ?: ದೂರಿನ ಪತ್ರದಲ್ಲಿಯೂ ಸಹ ಕೇವಲ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್, ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಶಾಸಕ ಆರ್.ಚಂದ್ರಪ್ಪ, ಬಿ.ಪಿ.ಹರೀಶ್, ಮಾಜಿ ಶಾಸಕ ಚಂದ್ರ ನಾಯ್ಕ್, ಮಾಜಿ ಸಂಸದ ಬಿ.ವಿ. ನಾಯ್ಕ್ ಹೆಸರುಗಳು ಮಾತ್ರ ಇವೆ. ಇವರೆಲ್ಲಾ ಯತ್ನಾಳ್ ಟೀಂ ಜೊತೆ ಗುರುತಿಸಿಕೊಂಡವರೇ ಆಗಿದ್ದಾರೆ. ಹಾಗಾಗಿ, ಇದು ಟೀಂ ಯತ್ನಾಳ್ ಅವರ ರಾಜ್ಯಪಾಲರ ಭೇಟಿಯಾದಂತಾಗಿದೆ.
ನಾಯಕತ್ವದ ಪ್ರಶ್ನೆ ಇಲ್ಲವೆಂದ ಯತ್ನಾಳ್:ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ''ರಾಜ್ಯಪಾಲರ ಭೇಟಿ ಪೂರ್ವ ನಿಯೋಜಿತ. ಹಾಗಾಗಿ, ಇಂದು ನಾವೆಲ್ಲಾ ಬಂದಿದ್ದೇವೆ'' ಎಂದರು. ಪಕ್ಷದ ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಯಾರೂ ಬಂದಿಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ''ಇಲ್ಲಿ ನಾಯಕತ್ವದ ಪ್ರಶ್ನೆ ಇಲ್ಲ. ಯಾವುದೇ ಗೊಂದಲವೂ ಇಲ್ಲ. ಎಲ್ಲಾ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ'' ಎಂದು ಹಾರಿಕೆಯ ಉತ್ತರ ನೀಡಿದರು.
ಪಾದಯಾತ್ರೆ:ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ''ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಪಾದಯಾತ್ರೆ ಮಾಡಲಿದ್ದೇವೆ. ಇದೇ ನೇತೃತ್ವದಲ್ಲಿ ಪಾದಯಾತ್ರೆ ಮಾಡುತ್ತೇವೆ'' ಎಂದು ಪರೋಕ್ಷವಾಗಿ ಯತ್ನಾಳ್ ಟೀಮ್ ನೇತೃತ್ವದಲ್ಲಿ ಎಂಬ ಉತ್ತರ ನೀಡಿದರು. ಬಳಿಕ ತಕ್ಷಣ ಸಾವರಿಸಿಕೊಂಡ ಲಿಂಬಾವಳಿ, ''ಪಾರ್ಟಿ ನೇತೃತ್ವದಲ್ಲಿ'' ಎಂದು ಮರು ಹೇಳಿಕೆ ನೀಡಿದರು.
ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಲೆದಂಡ: ಪ್ರತಾಪ್ ಸಿಂಹ - Pratap Simha