ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ಮುಂದೆ ನಿಗಮದ ಅಧ್ಯಕ್ಷ, ರಾಯಚೂರು ಶಾಸಕ ಬಸನಗೌಡ ದದ್ದಲ್ ಅವರು ಗುರುವಾರ ಹಾಜರಾಗಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇ.ಡಿ ಅಧಿಕಾರಿಗಳು ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದೇ ಉಳಿದಿದ್ದ ದದ್ದಲ್, ಬಳಿಕ ಮೊದಲನೇ ದಿನದ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಿದ್ದರು. ಅವರಿಗೆ ಮೂರು ಬಾರಿ ಇಡಿ ನೋಟಿಸ್ ನೀಡಲಾಗಿತ್ತು.
ಮಾಜಿ ಸಚಿವ ಬಿ.ನಾಗೇಂದ್ರ ಅವರ ಬಂಧನದ ಬಳಿಕ ಬಸನಗೌಡ ದದ್ದಲ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸುದ್ದಿಯಾಗಿತ್ತು. ಬಳಿಕ ಅವರು ಅಧಿವೇಶನಕ್ಕೆ ಹಾಜರಾಗಿ ತಮಗೆ ಯಾವುದೇ ನೋಟಿಸ್ ಬಂದಿಲ್ಲ. ತಾವು ನಾಪತ್ತೆ ಕೂಡ ಆಗಿರಲಿಲ್ಲ ಎಂದು ಸ್ಟಷ್ಟನೆ ನೀಡಿದ್ದರು. ಇಂದು ಮಧ್ಯಾಹ್ನ ಶಾಂತಿನಗರದ ಇ.ಡಿ ಕಚೇರಿಗೆ ಬಸನಗೌಡ ದದ್ದಲ್ ಹಾಜರಾಗಿದ್ದಾರೆ.
ಕೆಲ ದಿನಗಳ ಹಿಂದೆ ಪ್ರಕರಣದ ಸಂಬಂಧ ಇ.ಡಿ ಅಧಿಕಾರಿಗಳು ರಾಯಚೂರು ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಅವರ ನಿವಾಸಗಳ ಮೇಲೆ ಒಂದೇ ದಿನ ದಾಳಿ ನಡೆಸಿದ್ದರು. ಶಾಸಕರುಗಳ ಆಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಕುರಿತು ಅನೇಕ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಬಳಿಕ ಸುದೀರ್ಘ ವಿಚಾರಣೆ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ನಂತರ ಅವರನ್ನು ನ್ಯಾಯಾಲಯವು ಇ.ಡಿ ಕಸ್ಟಡಿಗೆ ವಹಿಸಿತ್ತು. ಇಂದು ಮತ್ತೆ 5 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಕಸ್ಟಡಿ ಅಂತ್ಯವಾಗಿದ್ದ ಹಿನ್ನೆಲೆಯಲ್ಲಿ ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ; ಮಾಜಿ ಸಚಿವ ಬಿ ನಾಗೇಂದ್ರ ಇಡಿ ಕಸ್ಟಡಿ ಮುಂದುವರಿಕೆ - B Nagendra ED custody continued