ಮೈಸೂರು: ಸಿಬ್ಬಂದಿಯ ಟಿಎ ಹಣವನ್ನು ತನ್ನ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿ ಸರ್ಕಾರಿ ಹಣ ದುರುಪಯೋಗ ಪಡಿಸಿಕೊಂಡಿರುವ ಹೆಡ್ ಕಾನ್ಸ್ಟೇಬಲ್ ಸಿ.ಆರ್. ಸುಪ್ರೀತ್ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಎಫ್ಡಿಎ ಪೊನ್ನಣ್ಣ ಅವರನ್ನು ವಿಚಾರಣೆ ಬಾಕಿ ಇರಿಸಿ ಕೆಎಸ್ಆರ್ಪಿ 5ನೇ ಪಡೆ ಕಮಾಂಡೆಂಟ್ ದೊರೆಮನಿ ಭೀಮಯ್ಯ ಸೇವೆಯಿಂದ ಅಮಾನತುಪಡಿಸಿದ್ದಾರೆ. ಹಣ ದುರುಪಯೋಗ ಪಡಿಸಿಕೊಂಡ ಸಂಬಂಧ ದೂರು ದಾಖಲಾದ ಹಿನ್ನೆಲೆ ಇಬ್ಬರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿ ಬಳಿಕ ಅಮಾನತು ಮಾಡಲಾಗಿದೆ.
ಲಲಿತಾ ಮಹಲ್ ರಸ್ತೆಯಲ್ಲಿರುವ ಕೆಎಸ್ಆರ್ಪಿ 5ನೇ ಪಡೆ ಕಮಾಂಡೆಂಟ್ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಪೊನ್ನಣ್ಣ ಮತ್ತು ಅವರಿಗೆ 2020ರ ಜನವರಿಯಿಂದ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಶೇಷ ಮೀಸಲು ಹೆಡ್ ಕಾನ್ಸ್ಟೇಬಲ್ ಸಿ.ಆರ್. ಸುಪ್ರೀತ್ ಹಣ ದುರುಪಯೋಗಪಡಿಸಿಕೊಂಡು ಸಿಕ್ಕಿಬಿದ್ದಿದ್ದರು. ಈ ಸಂಬಂಧ ಕಮಾಂಡೆಂಟ್ ದೊರೆಮನಿ ಭೀಮಯ್ಯ ಸೂಚನೆ ಮೇರೆಗೆ ಕೆಎಸ್ಎರ್ಪಿ ವಿಶೇಷ ಮೀಸಲು ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ನಾಯಕ್ ಸೆಪ್ಟೆಂಬರ್ 4 ರಂದು ನಜರ್ಬಾದ್ ಠಾಣೆಗೆ ದೂರು ನೀಡಿದ್ದರು.
ದೂರಿನಲ್ಲಿ, ಸುಪ್ರೀತ್ 2020 ರಿಂದೀಚೆಗೆ ಪ್ರಯಾಣ ಭತ್ಯೆಗೆ ಸಂಬಂಧಿಸಿದ ಬಿಲ್ಗಳನ್ನು ಜಿಲ್ಲಾ ಖಜಾನೆಗೆ ಸಲ್ಲಿಸುವ ಸಂದರ್ಭದಲ್ಲಿ ಸಿಬ್ಬಂದಿಯ ಖಾತೆಗೆ ಜಮಾ ಮಾಡುವ ಬದಲಾಗಿ ತಮ್ಮ ವೈಯುಕ್ತಿಕ ವೇತನ ಡ್ರಾ ಮಾಡುವ ಖಾತೆಗಳಿಗೆ ಅನಧಿಕೃತವಾಗಿ ಜಮೆ ಮಾಡಿಕೊಂಡಿದ್ದರು. 2024ರ ಸೆಪ್ಟೆಂಬರ್ 4ರ ಪ್ರಾಥಮಿಕ ಪರಿಶೀಲನೆ ವೇಳೆ ಅಂದಾಜು 25 ಲಕ್ಷ ರೂ. ಹಣ ದುರುಪಯೋಗ ಮಾಡಿಕೊಂಡಿರುವುದು ಕಂಡುಬಂದಿದ್ದು, ಇನ್ನೂ ಪರಿಶೀಲನೆ ನಡೆಯುತ್ತಿದೆ. ಬ್ಯಾಂಕ್ ಸ್ಪೇಟ್ಮೆಂಟ್ಗಳನ್ನು ಪರಿಶೀಲಿಸಿದಾಗ ಸುಪ್ರೀತ್ ಬ್ಯಾಂಕ್ ಖಾತೆಗಳಿಗೆ ಟಿಎ ಹಣ ಜಮಾ ಅಗಿರುವುದು ದೃಢಪಟ್ಟಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಸಿಐಡಿ ತನಿಖೆ: ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಸಿ.ಆರ್. ಸುಪ್ರೀತ್ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಪ್ರಕರಣವನ್ನು ಕೆಎಸ್ಆರ್ಪಿ ಎಡಿಜಿಪಿ ಅವರ ನಿರ್ದೇಶನದಂತೆ ನಜರ್ಬಾದ್ ಠಾಣೆಯಿಂದ ಬೆಂಗಳೂರಿನ ಸಿಡಿಐಗೆ ಒಪ್ಪಿಸಲಾಗಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ನಜರ್ ಬಾದ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬಾತ್ಮೀದಾರನ ಸುಳ್ಳು ಮಾಹಿತಿ ನಂಬಿ ಅಮಾಯಕರ ವಿರುದ್ಧ ಪ್ರಕರಣ: ಪಿಎಸ್ಐ ಸೇರಿ ನಾಲ್ವರು ಸಿಬ್ಬಂದಿ ಅಮಾನತು - Police Suspended