ಬೆಂಗಳೂರು: "ನಾವೂ ರೈತರ ಮಕ್ಕಳು. ನಾವು ಹೇಗೆ ರೈತರ ಆಸ್ತಿ ಪಡೆಯಲು ಆಗುತ್ತದೆ" ಎಂದು ಅಲ್ಪಸಂಖ್ಯಾತ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
ಸದಾಶಿವನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ರೈತರಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು. "ವಿಜಯಪುರದಲ್ಲಿ ನಡೆದ ಜಿಲ್ಲಾಧಿಕಾರಿಗಳೊಂದಿಗಿನ ಸಭೆಗೆ ಶಾಸಕ ಬಸನಗೌಡ ಯತ್ನಾಳ್ಗೆ ಆಹ್ವಾನ ನೀಡಲಾಗಿತ್ತು. ರೈತರ ಜಮೀನು ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿದ್ದರೆ ಅವರು ಅಂದು ಸಭೆಗೆ ಬರಬೇಕಾಗಿತ್ತು. ಬೇರೆಯವರ ಒಂದಿಂಚು ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳುವುದಿಲ್ಲ. ಬಿಜೆಪಿಯವರು ಸುಮ್ಮನೆ ವಿವಾದ ಸೃಷ್ಟಿಸುತ್ತಾರೆ" ಎಂದು ಟೀಕಿಸಿದರು.
"ಬೇರೆಯವರ ಆಸ್ತಿಯನ್ನು ಹೇಗೆ ಮುಟ್ಟಲು ಸಾಧ್ಯ?. ಬೇರೆಯವರ ಆಸ್ತಿಯನ್ನು ಹೇಗೆ ವಕ್ಫ್ ಆಸ್ತಿ ಎಂದು ಹೇಳಲು ಸಾಧ್ಯ?. ಯತ್ನಾಳ್ಗೆ ಕಾಳಜಿ ಇದ್ದಿದ್ದರೆ ಅವರು ಅಂದು ಡಿಸಿ ಸಭೆಗೆ ಬರುತ್ತಿದ್ದರು. ರೈತರಿಗೆ ನೋಟಿಸ್ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಜನಸಮಾನ್ಯರ ಆಸ್ತಿಯನ್ನು ನಾವು ತೆಗೆದುಕೊಳ್ಳಲು ಆಗುವುದಿಲ್ಲ. ಕಾನೂನು ಏನಿದೆಯೋ ಆ ಪ್ರಕಾರ ಮಾಡುತ್ತೇವೆ. ಕೇಂದ್ರ ಸರ್ಕಾರ ಮಸೂದೆ ತರುತ್ತಿದೆ. ಅದಕ್ಕಾಗಿ ಈ ರೀತಿ ಮಾಡಲಾಗುತ್ತಿದೆ" ಎಂದರು.
ಸಚಿವ ಜಮೀರ್ ಅಹ್ಮದ್ (ETV Bharat) ಒಂದು ಇಂಚು ರೈತರ ಭೂಮಿ ವಕ್ಫ್ಗೆ ಹೋಗಲು ಬಿಡಲ್ಲ: ಮತ್ತೊಂದೆಡೆ, ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, "ಗೆಜೆಟ್‌ನಲ್ಲಿ ತಪ್ಪಾಗಿ ನಮೂದಿಸಿದ್ದರಿಂದಾಗಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 1,200 ಎಕರೆ ವಕ್ಫ್ ಆಸ್ತಿ ಎನ್ನುವ ಗೊಂದಲ ಸೃಷ್ಟಿಯಾಗಿದೆ ಅಷ್ಟೆ. ಒಂದೇ ಒಂದು ಇಂಚು ರೈತರ ಭೂಮಿ ವಕ್ಫ್ಗೆ ಹೋಗಲು ಬಿಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಸಂಸದ ತೇಜಸ್ವಿ ಸೂರ್ಯ ಆತಂಕ ಪಡುವ ಅಗತ್ಯ ಇಲ್ಲ. ಯತ್ನಾಳ್ ರಾಜಕೀಯ ಮಾಡುತ್ತಿದ್ದಾರೆ. ಇಲ್ಲಿ 11 ಎಕರೆ ಮಾತ್ರ ವಕ್ಫ್ಗೆ ಸೇರಿದ್ದು, ಇದರಲ್ಲಿ 10 ಎಕರೆ 14 ಗುಂಟೆಯಲ್ಲಿ ಖಬರಸ್ಥಾನವಿದೆ. ಉಳಿದ 24 ಗುಂಟೆಯಲ್ಲಿ ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ. ಉಳಿದ ಜಮೀನೆಲ್ಲ ರೈತರಿಗೆ ಸೇರಿದೆ. ಇದನ್ನು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ" ಎಂದು ತಿಳಿಸಿದರು.
ರೈತರನ್ನು ಒಕ್ಕಲೆಬ್ಬಿಸುತ್ತಿರುವ ಷಡ್ಯಂತ್ರ ಬಯಲಾಗುತ್ತಿದೆ:ಇದಕ್ಕೂ ಮೊದಲು, "ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಭ್ರಷ್ಟಾಚಾರದಲ್ಲಿ ತೊಡಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಕ್ಷರಶಃ ಮರೆತಿರುವುದು ವಿಜಯಪುರ ಜಿಲ್ಲೆಯ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಷಡ್ಯಂತ್ರ ಬಯಲಾಗುತ್ತಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಟೀಕಿಸಿದ್ದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, "ತಲತಲಾಂತರ ಕಾಲದಿಂದಲೂ ಕೃಷಿ, ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ವಿಜಯಪುರದ ನೂರಾರು ರೈತ ಕುಟುಂಬಗಳಿಗೆ ತರಾತುರಿಯಲ್ಲಿ ನೋಟಿಸ್ ನೀಡಿ ಕೆಲವೊಂದು ದಾಖಲೆಗಳಲ್ಲಿ, ವಕ್ಫ್ ಬೋರ್ಡ್ ಕರ್ನಾಟಕ ಸರ್ಕಾರದ ಅನ್ವಯ ಎಂದು ನಮೂದಿಸಿ ಅಧಿಕಾರಿಗಳ ಮೂಲಕ ನೋಟಿಸ್ ನೀಡಿರುವ ಸರ್ಕಾರದ ಕ್ರಮ ರೈತ ವಿರೋಧಿ ನಿಲುವಿಗೆ ಸ್ಪಷ್ಟ ನಿದರ್ಶನವಾಗಿದೆ" ಎಂದು ಕಿಡಿಕಾರಿದ್ದರು.
"ವಕ್ಫ್ ಕಾಯ್ದೆ ಮೂಲಕ ಬಹುಸಂಖ್ಯಾತ ಹಿಂದೂಗಳಿಗೆ ಕಾಂಗ್ರೆಸ್ ಸರ್ಕಾರ ಎಸಗುತ್ತಿರುವ ಮೋಸ, ಅನ್ಯಾಯಗಳು ಗುಟ್ಟಾಗಿ ಉಳಿದಿಲ್ಲ. ಆತುರದ ಹಿಂದೂ ವಿರೋಧಿ ಹಾಗೂ ರೈತ ವಿರೋಧಿ ಕ್ರಮಗಳನ್ನು ಈ ಕೂಡಲೇ ನಿಲ್ಲಿಸದಿದ್ದರೆ ಬಿಜೆಪಿ ನ್ಯಾಯಕ್ಕಾಗಿ ಹೋರಾಟಕ್ಕಿಳಿಯಲಿದೆ" ಎಂದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ:ವಕ್ಫ್ ನೋಟಿಸ್ ವಿಚಾರ: ವಿಜಯಪುರ ಜಿಲ್ಲೆಯ ರೈತರೊಂದಿಗೆ ಸಂಸದ ತೇಜಸ್ವಿ ಸೂರ್ಯ ಸಂವಾದ