ಬೆಂಗಳೂರು: ವ್ಯಾಪಾರ ಉದ್ದಿಮೆ, ಶಿಕ್ಷಣ ಸಂಸ್ಥೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಶೇ.60ಷ್ಟು ಕನ್ನಡ ಅಳವಡಿಕೆಗೆ ಸಂಬಂಧಿಸಿದಂತೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ರಾಜ್ಯಪಾಲರಿಂದ ವಾಪಸ್ ಬಂದಿರುವುದಕ್ಕೆ, ಯಾವುದೇ ರಾಜಕೀಯ ಕಾರಣ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ವಿಧೇಯಕಕ್ಕೆ ಯಾರಿಂದಲೂ ವಿರೋಧವಿಲ್ಲ. ಬಜೆಟ್ ಅಧಿವೇಶನದ ದಿನಾಂಕ ನಿಗದಿಯಾಗಿರುವುದರಿಂದ ಎರಡೂ ಸದನದಲ್ಲಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯುವಂತೆ ರಾಜ್ಯಪಾಲರು ವಿಧೇಯಕವನ್ನು ವಾಪಸ್ ಕಳುಹಿಸಿದ್ದಾರೆ ಎಂದರು.
ನಾವು ಅಧಿವೇಶನದ ದಿನಾಂಕ ನಿಗದಿ ಮುನ್ನವೇ ಜ.5ರಂದೇ ರಾಜ್ಯಪಾಲರಿಗೆ ವಿಧೇಯಕ ಕಳುಹಿಸಿದ್ದೆವು. ಆದರೆ, ರಾಜ್ಯಪಾಲರ ಅನಾರೋಗ್ಯ ಹಾಗೂ ಅವರು ಊರಲ್ಲಿ ಇಲ್ಲದ ಕಾರಣ ಸಹಿ ಹಾಕುವುದು ಅವರಿಂದ ತಡ ಆಗಿದೆ. ಇದೀಗ ಅಧಿವೇಶನದ ದಿನಾಂಕ ನಿಗದಿಯಾಗಿದೆ. ಎರಡು ಸದನದಲ್ಲಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು. ರಾಜ್ಯದ ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ರಾಜ್ಯಪಾಲರು ಬೇರೆ ರೀತಿ ನಡೆದುಕೊಳ್ಳುವುದಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ತಾಂತ್ರಿಕ ಕಾರಣದಿಂದ ರಾಜ್ಯಪಾಲರು ವಿಧೇಯಕ ವಾಪಸ್ ಕಳುಹಿಸಿದ್ದಾರೆ ಎಂದರು.
ಕಾಂತರಾಜು ವರದಿ ಸ್ವೀಕಾರ ಮಾಡಲು ಮುಖ್ಯಮಂತ್ರಿಗಳಿಗೆ ತಾಕತ್ತಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇವರು ಮುಖ್ಯಮಂತ್ರಿ ಆಗಿದ್ದ ವೇಳೆ ವರದಿ ಸ್ವೀಕರಿಸಲು ತಾಕತ್ತು ಇರಲಿಲ್ಲವೇ. ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದ ಕಾರಣಕ್ಕೆ ಸಮೀಕ್ಷೆ ಮಾಡಿಸಿದ್ದು, ತಾಕತ್ತು ಇದ್ದಿದ್ದಕ್ಕೆ 168 ಕೋಟಿ ಹಣ ಕೊಟ್ಟಿದ್ದು, ತಾಕತ್ತು ಇರುವುದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಸ್ವೀಕಾರ ಮಾಡುತ್ತೇನೆ ಎಂದು ಹೇಳಿದ್ದರು. ಇದು ನಮ್ಮ ಸಿದ್ದರಾಮಯ್ಯ ಅವರ ನಿಜವಾದ ತಾಕತ್ತು. ಕುಮಾರಸ್ವಾಮಿ ಅವರು ಮೊದಲು ಚೆನ್ನಾಗಿ ಇದ್ದರು. ಬಿಜೆಪಿ ಜತೆ ಸೇರಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜಕಾರಣಕ್ಕಾಗಿ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.
ಕೇಸರಿ ಶಾಲು ಯಾರಪ್ಪನದ್ದೂ ಅಲ್ಲ. ಆಂಜನೇಯ ಇವರ ಸ್ವಂತದ್ದು ಎಂದು ಬಿಜೆಪಿಗರು ಭಾವಿಸಿದ್ದಾರೆ. ರಾಮನ ದೇವಸ್ಥಾನ ಕಟ್ಟಿ ಪ್ರಚಾರ ತೆಗೆದುಕೊಳ್ಳುವುದಲ್ಲ. ನಾವು ರಾಮ ಹಾಗೂ ಆಂಜನೇಯನ ಭಕ್ತರೇ. ವರ್ಷಕ್ಕೊಮ್ಮೆ ನಾನು ಮಾಲೆ ಹಾಕುತ್ತೇನೆ. ಇದೆಲ್ಲವೂ ಇವರದ್ದಲ್ಲ. ನಾನು ಕೂಡ ಹಿಂದು. ಹಿಂದುತ್ವವನ್ನು ಗುತ್ತಿಗೆ ಪಡೆದಿದ್ದಾರೆಯೇ? ಇದೆಲ್ಲ ಬಹಳ ದಿನ ನಡೆಯುವುದಿಲ್ಲ. ಜನ ಬುದ್ಧಿವಂತರಿದ್ದು, ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಕನ್ನಡ ಬೋರ್ಡ್ ಕಡ್ಡಾಯ ಸುಗ್ರೀವಾಜ್ಞೆ ರಾಜ್ಯಪಾಲರಿಂದ ವಾಪಸ್: ಅಧಿವೇಶನದಲ್ಲಿ ಅನುಮೋದನೆ ಎಂದ ಡಿಸಿಎಂ