ಚಿಕ್ಕೋಡಿ :ಚುನಾವಣೆ ಬಂದಾಗ ರಾಜಕೀಯ ನಾಯಕರು ಪಕ್ಷಾಂತರ ಮಾಡುವುದು ಸಹಜ. ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಸೇರ್ಪಡೆಯಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರಿಗೆ ಒಳ್ಳೆದಾಗಲಿ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ.
ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗೋನಳ್ಳಿ ಗ್ರಾಮದಲ್ಲಿ ಜೈನ ಸಮುದಾಯದ ಪಂಚ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಜಗದೀಶ್ ಶೆಟ್ಟರ್ ಎಲ್ಲಿ ಇರಬೇಕು ಎಂಬುವುದು ಅವರ ವೈಯಕ್ತಿಕ ತೀರ್ಮಾನ. ಬಿಜೆಪಿ ಪಕ್ಷಕ್ಕೆ ಮರಳಿದ್ದಾರೆ ಅವರಿಗೆ ಒಳ್ಳೆದಾಗಲಿ. ಒಬ್ಬರು ಹೋಗಿದ್ದಾರೆ ಅವರಿಗೆ ಒಳ್ಳೆದಾಗಲಿ. ಇವರು ಕಾಂಗ್ರೆಸ್ ಬಿಡುವುದರಿಂದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಡಿಸಿಎಂ ಸ್ಥಾನದ ಬಗ್ಗೆ ಚರ್ಚೆ ಇಲ್ಲ. ಏನೇ ಇದ್ದರೂ ಲೋಕಸಭಾ ಚುನಾವಣೆಗೆ ತಯಾರಿ ಮಾಡುತ್ತಿದ್ದೇವೆ. ಒಂದು ಕಡೆ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಎಲ್ಲ ಹಂತದಲ್ಲಿ ಕೆಲಸ ಮಾಡುತ್ತಿದ್ದೇವೆ. ಅಭ್ಯರ್ಥಿಗಳ ಬಗ್ಗೆ ಸರ್ವೆ ಆಗುತ್ತದೆ. ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದನ್ನ ಕಾದು ನೋಡೋಣ ಎಂದು ಹೇಳಿದ್ದಾರೆ. ಕಾಂತರಾಜು ವರದಿ ಬಿಡುಗಡೆ ವಿಳಂಬ ವಿಚಾರವಾಗಿ ಮಾತನಾಡಿ, ಜನಗಣತಿ ವರದಿ ಬಿಡುಗಡೆ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದಷ್ಟು ಬೇಗನೆ ಬಿಡುಗಡೆ ಆಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.