ಬೆಳಗಾವಿ :ನಮಗೆ ಯಾರೂ ಮಾತನಾಡಬೇಡಿ ಅಂತ ಹೇಳಿಲ್ಲ. ಆದರೆ, ನಮ್ಮ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಅರಿವು ನಮಗೂ ಇದೆ. ಹಾಗಾಗಿ, ಅವರು ನಮಗೆ ಹೇಳಬೇಕು ಎಂದೇನೂ ಇಲ್ಲ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಯಾವುದೇ ರೀತಿ ಹಾಟ್ ಇರಲಿಲ್ಲ. ಆದರೆ, ಹಾಟ್ ಮಾಡಿದ್ದಾರೆ. ಆ ಕುರಿತು ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಎಲ್ಲೂ ಸಹ ನಾವು ಅಧ್ಯಕ್ಷರ ಬದಲಾವಣೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನೈಜ ಸ್ಥಿತಿ ಹೇಳಲು ಹೋದಾಗ ಅದು ಬೇರೆ ಇರುತ್ತದೆ. ಅದನ್ನೆ ಬಿಂಬಿಸಲು ಹೋದರೆ ನಮಗೆ ಮತ್ತು ಪಕ್ಷಕ್ಕೂ ಕಷ್ಟ ಆಗುತ್ತದೆ. ಅಧ್ಯಕ್ಷರ ಬದಲಾವಣೆ ಮಾಡುವ ಅಧಿಕಾರ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು (ETV Bharat) ನಾನು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಧ್ಯಕ್ಷನಾಗಿ ಮುಂದುವರಿದಿದ್ದೆ ಎಂಬ ಡಾ.ಜಿ.ಪರಮೇಶ್ವರ್ ಹೇಳಿಕೆ ಬಗ್ಗೆ, ಆ ರೀತಿ ನಾವು ಏನೂ ಹೇಳಿಯೇ ಇಲ್ಲ. ನಾವೇನಿದ್ದರೂ ಹೈಕಮಾಂಡ್ ಅಂತಾನೇ ಹೇಳಿದ್ದೇವೆ. ಆ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಾವು ಏನೋ ಹೇಳುವುದರಿಂದ ಪಕ್ಷಕ್ಕೆ ಮುಜುಗರ ಆಗಬಾರದು ಅಂತಾ ಸ್ಪಷ್ಟೀಕರಣ ಕೊಟ್ಟಿದ್ದೇವೆ ಎಂದು ಪುನರುಚ್ಚರಿಸಿದರು.
ಸಿಎಲ್ಪಿ ಸಭೆಯಲ್ಲಿ ಬೆಳಗಾವಿ ಕಾಂಗ್ರೆಸ್ ಕಚೇರಿ ನಿರ್ಮಾಣದಲ್ಲಿ ರಮೇಶ್ ಜಾರಕಿಹೊಳಿ ಸಹಾಯ ಮಾಡಿದ್ದರು ಎಂದು ಅವರ ಹೆಸರು ನಾನೇ ಪ್ರಸ್ತಾಪ ಮಾಡಿದ್ದೆ. ಕಟ್ಟಡ ನಿರ್ಮಾಣದಲ್ಲಿ ಯಾರ್ಯಾರು ಕೊಡುಗೆ ಕೊಟ್ಟಿದ್ದಾರೆ ಅವರಿಗೆಲ್ಲಾ ಅದರ ಶ್ರೇಯಸ್ಸು ಹೋಗಬೇಕು. ಯಾರೋ ಒಬ್ಬರಿಗೆ ಅದರ ಶ್ರೇಯಸ್ಸು ಹೋಗಬಾರದು ಅಂತಾ ತಿಳಿಸಿದ್ದೇನೆ ಎಂದರು.
ಉಗ್ರರೂಪ ತಾಳಿದರೆ ಮಾತ್ರ ಭವಿಷ್ಯ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ, ನಾವು ಎಷ್ಟು ಸೌಮ್ಯ ಇರುತ್ತೇವೋ ಅಷ್ಟು ಒಳ್ಳೆಯ ಭವಿಷ್ಯ ಇರುತ್ತದೆ. ಹಾಗಾಗಿ, ಉಗ್ರ ರೂಪ ತಾಳುವ ಅವಶ್ಯಕತೆ ನಮಗಿಲ್ಲ, ಸಂದರ್ಭ ಬಂದಾಗ ನಾನು ಮಾತಾಡಿದ್ದೇನೆ. ಅದೇ ರೀತಿ ಸುರ್ಜೇವಾಲ ಅವರು ಟೈಂ ಕೊಟ್ಟಿದ್ದರು. ಆಗ ಎಲ್ಲರೂ ಸಹ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದರು.
ಅಂಗಡಿಯಲ್ಲಿ ಹುದ್ದೆ ಸಿಗುವುದಿಲ್ಲ ಎಂಬ ಡಿ. ಕೆ ಶಿವಕುಮಾರ್ ಹೇಳಿಕೆಗೆ, ನಾನು ಏನೋ ಒಂದು ಹೇಳಿರುತ್ತೇನೆ. ನೀವು ಬೇರೆ ಏನೋ ಅವರನ್ನು ಕೇಳುತ್ತೀರಿ. ಅವರು ಯಾವುದೋ ಟೆನ್ಷನ್ನಲ್ಲಿ ಇರುತ್ತಾರೆ. ಇನ್ನೇನೋ ಹೇಳುತ್ತಾರೆ. ಅದನ್ನು ತಂದು ನನಗೆ ಕೇಳುತ್ತೀರಿ. ನಾನು ಮತ್ತೆ ಬೇರೆ ಏನೋ ಹೇಳುತ್ತೇನೆ. ಒಂದು ಕಲರ್ ಅದು ಏಳು ಕಲರ್ ಆಗುತ್ತವೆ. ಹಾಗೆ, ಅವರೊಂದು ಹೇಳೋದು, ನೀವೊಂದು ಕೇಳೋದು ಆದರೆ ಹೀಗೆ ಆಗುತ್ತೆ. ಹಾಗಾಗಿ, ಒಂದೆರಡು ದಿನ ಬಿಟ್ಟು ಅದನ್ನು ಕೇಳಿದರೆ ವಾತಾವರಣ ತಿಳಿಯಾಗಿರುತ್ತದೆ ಎಂದು ತಿಳಿಸಿದರು.
ಪಕ್ಷದಲ್ಲಿ ಯಾವುದೇ ರೀತಿ ಗೊಂದಲ ಇಲ್ಲ. ಎಲ್ಲವೂ ಸರಿ ಇದೆ. ನಾವು ಹೇಳೋದು ಒಂದು, ಮಾಧ್ಯಮದಲ್ಲಿ ಪ್ರಸಾರ ಆಗೋದು ಬೇರೆ ಇರುವುದರಿಂದ ಆ ರೀತಿ ಗದ್ದಲ ಆಗುತ್ತದೆ. ಆ ರೀತಿ ಆಗಬಾರದು ಅಂತಾ ಇಲ್ಲಿಯೂ ನಾನು ಮನವಿ ಮಾಡಿಕೊಳ್ಳುತ್ತೇನೆ. ನಾವು ಏನು ಹೇಳಿರುತ್ತೇವೆ ಅದನ್ನಷ್ಟೇ ಪ್ರಸಾರ ಮಾಡಿದರೆ ನಮಗೆ ಮತ್ತು ಪಕ್ಷಕ್ಕೂ ಒಳ್ಳೆಯದು ಎಂದು ಅಭಿಪ್ರಾಯ ಪಟ್ಟರು.
ಸ್ಥಾನಮಾನವನ್ನು ಸಾಮರ್ಥ್ಯ ನೋಡಿ ಕೊಡುತ್ತಾರೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ನಿಜ. ಪಕ್ಷ ಹಾಗೆ ಸುಮ್ಮನೆ ಕೊಡುವುದಿಲ್ಲ. ಅವರ ಸಾಮರ್ಥ್ಯ ಮತ್ತು ಜನಪ್ರಿಯತೆ ನೋಡಿಯೇ ಸ್ಥಾನಮಾನ ಕೊಡುತ್ತಾರೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ ಎಂದು ಸಮರ್ಥಿಸಿಕೊಂಡರು.
ನಾಳೆ ರಣದೀಪ್ಸಿಂಗ್ ಸುರ್ಜೇವಾಲ ಬೆಳಗಾವಿಗೆ ಬರುತ್ತಾರೆ. ಸಭೆ ಮಾಡುತ್ತಾರೆ. ನಾಡಿದ್ದು ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರದಲ್ಲಿ ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು. ಜ. 21ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಹೊಸ ತಯಾರಿ ಏನೂ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮುಂಚೆ ಏನು ಸಿದ್ಧತೆ ಮಾಡಿಕೊಂಡಿದ್ದೆವೋ ಯಥಾ ಪ್ರಕಾರ ಮುಂದುವರಿಯುತ್ತದೆ. ಸುವರ್ಣ ವಿಧಾನಸೌಧ ಬಳಿ ಗಾಂಧೀಜಿ ಪ್ರತಿಮೆ ಉದ್ಘಾಟನೆ ಮಾಡುತ್ತೇವೆ. ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಸದ್ಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಮಾತ್ರ ಬರುವುದು ಸ್ಪಷ್ಟವಾಗಿದೆ. ಅಂದಾಜು 2 ಲಕ್ಷ ಜನರನ್ನು ಸೇರಿಸುತ್ತೇವೆ. ಗಾಂಧೀಜಿ ಪ್ರತಿಮೆ ಉದ್ಘಾಟನೆ ಸರ್ಕಾರಿ ಕಾರ್ಯಕ್ರಮ. ಅಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸುತ್ತಾರೆ. ಬಹಿರಂಗ ಸಮಾವೇಶ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದೆ. ಹಾಗಾಗಿ, ಇಂಡಿ ಕೂಟ ಇದರಲ್ಲಿ ಬರುವುದಿಲ್ಲ. ಕಾಂಗ್ರೆಸ್ ನಾಯಕರು ಮಾತ್ರ ಬರುತ್ತಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ :ನೋಟಿಸ್ ಕೊಟ್ಟ ಕೂಡಲೇ ದೊಡ್ಡ ಅನಾಹುತ ಏನೂ ಆಗುವುದಿಲ್ಲ: ಸಚಿವ ಸತೀಶ್ ಜಾರಕಿಹೊಳಿ - SATHISH JARAKIHOLI REACTION